ಹತ್ತು ತಿಂಗಳಿಂದ ವೇತನ ಇಲ್ಲದೇ ಶಿಕ್ಷಕರ ಪರದಾಟ!

| Published : Jun 28 2024, 12:55 AM IST / Updated: Jun 28 2024, 01:27 PM IST

ಸಾರಾಂಶ

ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಕೈಗೊಂಡ ನಿರ್ಧಾರದಿಂದ ಇಬ್ಬರು ಅನುದಾನಿತ ಶಾಲೆಯ ಶಿಕ್ಷಕರು ಇದೀಗ ಹತ್ತು ತಿಂಗಳಿನಿಂದ ಸಂಬಳ ಇಲ್ಲದೇ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ : ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಕೈಗೊಂಡ ನಿರ್ಧಾರದಿಂದ ಇಬ್ಬರು ಅನುದಾನಿತ ಶಾಲೆಯ ಶಿಕ್ಷಕರು ಇದೀಗ ಹತ್ತು ತಿಂಗಳಿನಿಂದ ಸಂಬಳ ಇಲ್ಲದೇ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ.

ವಿಜಯಪುರ ಶಾಲಾ ಶಿಕ್ಷಣ ಇಲಾಖೆಯಲ್ಲಿನ ಅವ್ಯವಸ್ಥೆಯಿಂದಾಗಿ ವರ್ಷವೇ ಕಳೆಯುತ್ತಿದ್ದರೂ ಕೆಲವು ಶಿಕ್ಷಕರಿಗೆ ಸಮಸ್ಯೆ ಬಗೆಹರಿದಿಲ್ಲ. ಸರಿಯಾದ ಸ್ಥಳ ನಿಯೋಜನೇಯೂ ಇಲ್ಲದೇ, ಸಂಬಳವೂ ಇಲ್ಲದೆ ಕಳೆದೊಂದು ವರ್ಷದಿಂದ ಶಿಕ್ಷಕರು ಗೋಳಾಡುತ್ತಿದ್ದಾರೆ. ಈ ಕುರಿತು ತಕ್ಷಣ ಸಂಬಂಧಿತ ಅಧಿಕಾರಿಗಳು ಅನುದಾನಿತ ಶಾಲೆಗಳ ಹೆಚ್ಚುವರಿ ಶಿಕ್ಷಕರಿಗೆ ದಾರಿ ತೋರಿಸಬೇಕಿದೆ.

ಸ್ಥಳ ನಿಯೋಜನೆ ಇಲ್ಲ:

ಕಳೆದ ಶೈಕ್ಷಣಿಕ ವರ್ಷದಲ್ಲಿ ಕನ್ನಾಳದಲ್ಲಿನ ಅನುದಾನಿತ ಬಂಜಾರಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದ್ದರಿಂದ ಇಲ್ಲಿನ ಶಿಕ್ಷಕ ಎಸ್.ಎಂ.ಚವ್ಹಾಣ ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ತಿಕೋಟಾ ತಾಲೂಕಿನ ತರಸೇವಾಡಿ ತಾಂಡಾದಲ್ಲಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ದಾಖಲಾತಿ ಹಿನ್ನೆಲೆ ಇಲ್ಲಿನ ಶಿಕ್ಷಕ ಎಸ್.ಎಂ.ಚವ್ಹಾಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಷ್ಟೇ ಅಲ್ಲದೇ ಸುಮಾರು 10ಕ್ಕೂ ಅಧಿಕ ಶಿಕ್ಷಕರು ಹೀಗೆ ಶೂನ್ಯ ದಾಖಲಾತಿ ಹಾಗೂ ಹೆಚ್ಚುವರಿಯಿಂದಾಗಿ ಸ್ಥಳ ನಿಯೋಜನೆ ಆಗದೇ ಗೋಳಾಡುತ್ತಿದ್ದಾರೆ.

ಆಡಳಿತ ಮಂಡಳಿ ಯಡವಟ್ಟು:

ಬಿಜಾಪುರ ಜಿಲ್ಲಾ ಬಂಜಾರ ವಿದ್ಯಾವರ್ದಕ ಸಂಘದ ಅಡಿಯಲ್ಲಿರುವ ಈ ಕೆಳಗಿನ ಅನುದಾನಿತ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಅನುಮತಿ ಪಡೆಯಬೇಕಿತ್ತು. ಇಲಾಖೆ ಅನುಮತಿ ಪಡೆಯುವ ಮೊದಲೇ ಶಾಲಾ ಆಡಳಿತ ಮಂಡಳಿಯೇ ತಮ್ಮ ಸಂಸ್ಥೆಯ ಬೇರೆ ಶಾಲೆಗಳಿಗೆ ನಿಯೋಜಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ.

ತಾಲೂಕಿನ ಕನ್ನಾಳದಲ್ಲಿನ ಅನುದಾನಿತ ಬಂಜಾರಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದ್ದರಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಎಸ್.ಎಂ.ಚವ್ಹಾಣ ಅವರನ್ನು ತಮ್ಮದೇ ಸಂಸ್ಥೆಯ ಇನ್ನೊಂದು ಶಾಲೆಯಾದ ಸೇವಾಲಾಲ ನಗರದಲ್ಲಿರುವ ಬಂಜಾರಾ ಹಿರಿಯ ಪ್ರಾಥಮಿಕ ಶಾಲೆಗೆ ಆಡಳಿತ ಮಂಡಳಿಯೇ ನೇಮಿಸಿದೆ. ಅದರಂತೆ ತಿಕೋಟಾ ತಾಲೂಕಿನ ತರಸೇವಾಡಿ ತಾಂಡಾದಲ್ಲಿನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದ್ದರಿಂದ ಇಲ್ಲಿ ಕರ್ತವ್ಯದಲ್ಲಿದ್ದ ಶಿಕ್ಷಕ ಎನ್.ಎಂ.ಚವ್ಹಾಣ ಅವರನ್ನು ತಮ್ಮದೇ ಸಂಸ್ಥೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ-2ರಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಆಡಳಿತ ಮಂಡಳಿಯೇ ನೇಮಿಸಿದೆ.

ಆಡಳಿತ ಮಂಡಳಿ ಶಿಕ್ಷಕರನ್ನು

ವರ್ಗಾಯಿಸಿಗೊಂಡಿದ್ದೇ ಸಮಸ್ಯೆಗೆ ಕಾರಣ

ಯಾವುದೇ ಅನುದಾನಿತ ಶಾಲೆಗಳಲ್ಲಿ ಶೂನ್ಯ ದಾಖಲಾತಿಗಳಾದಾಗ ಅಥವಾ ಹೆಚ್ಚುವರಿ ಶಿಕ್ಷಕರಿದ್ದಾಗ ಶಾಲಾ ಆಡಳಿತ ಮಂಡಳಿ ಅಂತಹ ಶಿಕ್ಷಕರ ವಿವರವನ್ನು ಶಾಲಾ ಶಿಕ್ಷಣ ಇಲಾಖೆಗೆ ನೀಡಬೇಕು. ಬಳಿಕ ಪರಿಶೀಲಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಶಿಕ್ಷಕರಿಗೆ ಬೇರೆ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಬೇಕಿತ್ತು. ಆದರೆ ಇಲ್ಲಿ ಆಡಳಿತ ಮಂಡಳಿ ತಾವೇ ಬೇರೆಡೆ ಸ್ಥಳ ನಿಯುಕ್ತಿ ಮಾಡಿಕೊಂಡಿದ್ದರಿಂದ ಶಿಕ್ಷಕರಿಗೆ ಸಮಸ್ಯೆ ಎದುರಾಗಿದೆ. 

ಕಳೆದ ಸಾಲಿನಲ್ಲಿ ನಮ್ಮ ಶಾಲೆಯಲ್ಲಿ ಶೂನ್ಯ ದಾಖಲಾತಿ ಆಗಿದ್ದರಿಂದ ನಮ್ಮ ಅನುದಾನಿತ ಶಾಲೆಯ ಆಡಳಿತ ಮಂಡಳಿ ತಮ್ಮದೇ ಬೇರೆ ಶಾಲೆಗೆ ನಮ್ಮನ್ನು ನಿಯೋಜಿಸಿ ಆದೇಶಿಸಿದ್ದಾರೆ. ಅದರಂತೆ ನಾವು ಇನ್ನೊಂದು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಮಗೆ 2023 ಸೆಪ್ಟೆಂಬರ್‌ನಿಂದ ಸಂಬಳ ಆಗಿಲ್ಲ. ನಿಯಮದ ಪ್ರಕಾರ ನಮ್ಮನ್ನು ನಿಯೋಜಿಸಿ ತಡೆಹಿಡಿದಿರುವ ಸಂಬಳವನ್ನು ಬಿಡುಗಡೆಗೊಳಿಸಬೇಕು ಎಂಬುದು ನಮ್ಮ ಒತ್ತಾಯ.

-ಎನ್.ಎಂ.ಚವ್ಹಾಣ, ಶೂನ್ಯ ದಾಖಲಾತಿ ಹೊಂದಿದ ಶಾಲೆಯ ಶಿಕ್ಷಕ

ಶೂನ್ಯ ದಾಖಲಾತಿ ಶಾಲೆ ಶಿಕ್ಷಕರು ಅಥವಾ ಹೆಚ್ಚುವರಿ ಶಾಲೆಯ ಶಿಕ್ಷಕರಿಗೆ ಕೌನ್ಸೆಲಿಂಗ್ ಮಾಡಿ ಶಿಕ್ಷಣ ಇಲಾಖೆಯಿಂದಲೇ ಬೇರೆ ಶಾಲೆಗಳಿಗೆ ಪೋಸ್ಟಿಂಗ್ ಕೊಡಲಾಗುತ್ತದೆ. ಇಲ್ಲಿ ಸರಿಯಾದ ನಿಯಮ ಪಾಲನೆ ಆಗದ ಹಿನ್ನೆಲೆ ಈ ಶಿಕ್ಷಕರ ಸಂಬಳಕ್ಕೆ ತಡೆಯಾಗಿದೆ. ಇಲಾಖೆಯನ್ನು ಸಂಪರ್ಕಿಸಿ ಕೌನ್ಸೆಲಿಂಗ್ ಮಾಡಿಸಿಕೊಂಡು ಇಲಾಖೆ ನಿಯೋಜಿಸಿದ ಸ್ಥಳಕ್ಕೆ ಅವರು ಹೋಗಿ ಕರ್ತವ್ಯ ಆರಂಭಿಸಿದ ತಕ್ಷಣವೇ ಶಿಕ್ಷಕರ ಸಂಬಳ ಬಿಡುಗಡೆಗೊಳಿಸಲಾಗುವುದು.

-ಉಮಾದೇವಿ ಸೊನ್ನದ, ಉಪನಿರ್ದೇಶಕಿ, ಶಾಲಾ ಶಿಕ್ಷಣ ಇಲಾಖೆ.