ಸಾರಾಂಶ
ಸಂಡೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆಯ ೧೦ ಗಣಿ ಪ್ರದೇಶಗಳನ್ನು ಹರಾಜಿಗೆ ನಿರ್ಧರಿಸಿದೆ. ಇದಕ್ಕಾಗಿ ಅ.೩ರಂದು ತಾಂತ್ರಿಕ ಬಿಡ್ಡಿಂಗ್ ಆಹ್ವಾನಿಸಿರುವುದು ಇಲ್ಲಿನ ಪರಿಸರವಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಈಗಾಗಲೇ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರ, ಜನಜೀವನದ ಮೇಲಾಗುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಅರಿತಿರುವ ಪರಿಸರವಾದಿಗಳು, ಹೊಸ ಗಣಿಗಾರಿಕೆಗೆ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಕೆಲವರು "ದೋಚಿ, ಎಷ್ಟು ಸಾಧ್ಯವೋ ಅಷ್ಟನ್ನು ದೋಚಿ " ಎಂದು ಕಿಡಿಕಾರಿದ್ದಾರೆ. ಸಂಡೂರಿನ ಗಣಿ ಹರಾಜು ಹಾಕುವುದನ್ನು ಬಿಟ್ಟು ಸಂಡೂರು ತಾಲೂಕನ್ನೇ ಹರಾಜು ಮಾಡಿದರೆ ಒಳ್ಳೆಯದು. ಆ ಕಾಲ ಸಮೀಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು ಬಂಡವಾಳಶಾಹಿಗಳಿಗೆ ದೇಶದ ಜಲ, ನೆಲ, ಅರಣ್ಯ, ಖನಿಜ ಸಂಪತ್ತು ಎಲ್ಲವನ್ನೂ ಮಾರಾಟಕ್ಕಿಟ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಡೂರು ಸೇರಿದಂತೆ ವಿವಿಧೆಡೆ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆಗೆ ವಿವಿಧ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ, ಇದು ಮುಂದೆ ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.ಕೋಟ್:ಸಂಡೂರಿನ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರಲು ಸಾರ್ವಜನಿಕರು ಹರಸಾಹಸ ಪಡಬೇಕಿದೆ. ಸಾವಿರಾರು ಅದಿರು ಲಾರಿಗಳು ತಾಲೂಕಿನಲ್ಲಿ ಸಂಚರಿಸುತ್ತವೆ. ವರ್ಷಕ್ಕೆ ಸಾವಿರಾರು ಜನರು ತಾಲೂಕಿನಲ್ಲಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ತಾಲೂಕಿನಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದರೆ, ೨೦೦೪ -೨೦೧೦ರ ಅವಧಿಯಲ್ಲಿನ ಟ್ರಾಫಿಕ್ ಜಾಮ್, ಅಪಘಾತದಂತಹ ಘಟನೆಗಳು ಮರುಕಳಿಸಲಿವೆ. ಜನರು ಹಾಗೂ ಜೀವ ವೈವಿಧ್ಯದ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ.
೨೪ ಗಂಟೆಯ ಗಣಿಗಾರಿಕೆಗೆ ವಿರೋಧ: ಸಲ್ಲಿಕೆಯಾಗದ ಪ್ರಸ್ತಾವ: ವನ್ಯಜೀವಿಧಾಮ ಹೊರತುಪಡಿಸಿ ಉಳಿದೆಡೆ ದಿನದ ೨೪ ಗಂಟೆಯೂ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವಗಳನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಉದ್ದೇಶಿಸಿದ್ದ ಪ್ರಕ್ರಿಯೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನ.೧೪ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿದು ಬಂದಿದೆ.ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಕಾರ್ಯದರ್ಶಿಗೆ ಪತ್ರ ಬರೆದು, ನ.೧೪ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸಬಾರದೆಂದು ಕಾಯ್ದೆ ತಿದ್ದುಪಡಿ ಪ್ರಸ್ತಾವ ಹಾಗೂ ಜೀವ ವೈವಿಧ್ಯ ಮತ್ತು ವನ್ಯಜೀವಿ ಧಾಮಗಳನ್ನು ಹೊರತುಪಡಿಸಿ ಉಳಿದೆಡೆ ದಿನದ ೨೪ ಗಂಟೆಯೂ ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಪ್ರಸ್ತಾವಗಳನ್ನು ಮಂಡಿಸಲು ನಿರ್ದೇಶಿಸಿದ್ದರು.ಈ ನಿರ್ದೇಶನಕ್ಕೆ ಸಮಾಜ ಪರಿವರ್ತನ ಸಮುದಾಯ, ಜನ ಸಂಗ್ರಾಮ ಪರಿಷತ್ ಮುಂತಾದ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಈ ಪ್ರಸ್ತಾವಗಳನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.
ಜೀವ ವೈವಿಧ್ಯ ಹಾಗೂ ವನ್ಯಜೀವಿ ಧಾಮಗಳನ್ನು ಹೊರತುಪಡಿಸಿ ಇತರೆಡೆ ದಿನದ ೨೪ ಗಂಟೆ ಗಣಿಗಾರಿಕೆಗೆ ಅವಕಾಶ ಕೊಡುವ ಪ್ರಕ್ರಿಯೆಗೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನ.೧೪ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವ ಮಂಡನೆಯಾಗಿಲ್ಲ. ಈ ವಿಷಯ ಕುರಿತಂತೆ ಸಾರ್ವಜನಿಕರು ಹಾಗೂ ಪರಿಸರವಾದಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ ಎಂದು ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ಕನ್ನಡಪ್ರಭಕ್ಕೆ ತಿಳಿಸಿದರು.