ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಲೆಮಾರಿ ಜನಾಂಗದವರಿಗೆ ನೆಲೆ ಕಲ್ಪಿಸಿಕೊಡುವುದರ ಮೂಲಕ ಟೆಂಟ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಗುರಿ ಹೊಂದಿರುವುದಾಗಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು.ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಲೆಮಾರಿ ಜನಾಂಗದವರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಮುಖ್ಯಮಂತ್ರಿ ಅವರೂ ಸಂಕಲ್ಪ ಮಾಡಿದ್ದಾರೆ. ಟೆಂಟ್ ಮುಕ್ತ ಕರ್ನಾಟಕ ನಿರ್ಮಾಣ ಅವರ ಕನಸಾಗಿದೆ. ನನ್ನ ಅವಧಿ ಮುಗಿಯುವುದರೊಳಗೆ ಅದನ್ನು ಸಾಕಾರಗೊಳಿಸಬೇಕೆಂಬ ಧ್ಯೇಯದೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಾನು ಅಧಿಕಾರ ವಹಿಸಿಕೊಂಡ ಬಳಿಕ ಇದುವರೆಗೂ 14 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮಾರ್ಚ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಸಭೆ ನಡೆಸಿ ವಸ್ತುಸ್ಥಿತಿ ವರದಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಆನಂತರ ತಾಲೂಕುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.ದನಿ ಇಲ್ಲದ, ರಾಜಕೀಯ ಪ್ರಾತಿನಿಧ್ಯವಿಲ್ಲದ, ಶಿಕ್ಷಣ ಮತ್ತು ಅವಕಾಶ ವಂಚಿತ ಸಮುದಾಯವೆಂದರೆ ಅಲೆಮಾರಿ ಸಮುದಾಯ. ಒಂದು ಕಡೆ ನೆಲೆಯನ್ನು ಕಂಡುಕೊಳ್ಳಲಾಗದೆ, ಕೊಳಚೆ ಪ್ರದೇಶಗಳ ಸುತ್ತ ಟೆಂಟ್ ಹಾಕಿಕೊಂಡು ದುಸ್ಥಿತಿಯಲ್ಲಿರುವ ಜೀವನ ನಡೆಸುತ್ತಿದ್ದಾರೆ. ಇವರ ಬದುಕು ಸುಧಾರಣೆಯಾಗಬೇಕು. ಮೊದಲು ಅವರು ಒಂದೆಡೆ ನೆಲೆ ನಿಲ್ಲುವಂತೆ ಮಾಡುವ ಅವಶ್ಯಕತೆ ಇದೆ. ಅವರಿಗೆ ಮನೆಗಳನ್ನು ಕಲ್ಪಿಸಿಕೊಡಲು ಜಾಗ ಗುರುತಿಸುವ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಅವರಿಗೆ ನೆಲೆ ಕಲ್ಪಿಸಿದ ಬಳಿಕ ಶಿಕ್ಷಣವನ್ನು ದೊರಕಿಸಿಕೊಟ್ಟರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಅದಕ್ಕಾಗಿ ಅಧಿಕಾರಿಗಳು, ಸಂಘಟನೆಗಳು, ಸಾರ್ವಜನಿಕರು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕಿದೆ ಎಂದರು.
ಅಲೆಮಾರಿ ಸಮುದಾಯದವರಿಗೆ ಇದುವರೆಗೂ ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಅವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಅವರಿಗೆ ನಿವೇಶನ, ಮನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಲೆಮಾರಿ ಜನಾಂಗದ ಮಕ್ಕಳು ಇದುವರೆಗೂ ಶಾಲೆಯ ಮುಖವನ್ನೇ ನೋಡದಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.ಅಲೆಮಾರಿಗಳ ಬದುಕು ಸುಧಾರಣೆಯಾಗಬೇಕಾದರೆ ಸಮಾಜದ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳು ಮಾತೃಹೃದಯಿಗಳಾಗಬೇಕು. ಯಾವ ಕಾರಣಕ್ಕೂ ಅಲೆಮಾರಿ ಜನಾಂಗದವರ ಶ್ರೇಯೋಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ನುಡಿದರು.
ಅಲೆಮಾರಿಗಳ ವಿಚಾರದಲ್ಲಿ ಪ್ರತಿಷ್ಠೆಯನ್ನು ದೂರವಿಡಬೇಕು. ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಸರ್ಕಾರದೊಂದಿಗೆ, ನಿಗಮದೊಂದಿಗೆ ಮೌಖಿಕ ವ್ಯವಹಾರವನ್ನು ನಡೆಸದೆ ಪತ್ರದ ಮೂಲಕ ವ್ಯವಹಾರ ನಡೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲೆಯಲ್ಲಿರುವ ಅಲೆಮಾರಿಗಳ ಸಮಸ್ಯೆ ನಿವಾರಣೆಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿರ್ದಿಷ್ಟ ದಿನಗಳೊಳಗೆ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಅಧಿಕಾರಿ ವರ್ಗದಿಂದ ದೊರಕಿದೆ. ತ್ವರಿತಗತಿಯಲ್ಲಿ ಅಲೆಮಾರಿ ಸಮುದಾಯದವರ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಅಲೆಮಾರಿ ಜನಾಂಗದವರಿಗೆ ಈವರೆಗೂ ಶವ ಹೂಳುವುದಕ್ಕೂ ಜಾಗ ಸಿಗದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಅಮಾನವೀಯ ಸ್ಥಿತಿಯಲ್ಲಿರುವ ಅಲೆಮಾರಿ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ್ ಏಕಲವ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ಧಲಿಂಗೇಶ್ ಹಾಜರಿದ್ದರು.