ಸಾರಾಂಶ
ಕಾಂಗ್ರೆಸ್ ಶಾಸಕ ಪ್ರಕಾಶ ಕೋಳಿವಾಡ ವಿರುದ್ಧ ರಾಣಿಬೆನ್ನೂರಿನಲ್ಲಿ ಆಕ್ರೋಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಕಾಂಗ್ರೆಸ್ ಶಾಸಕ ಪ್ರಕಾಶ ಕೋಳಿವಾಡ ತಮ್ಮ ವಿವಾಹ ವಾರ್ಷಿಕೋತ್ಸವ ನಿಮಿತ್ತ ವಿದೇಶ ಪ್ರವಾಸ ಕೈಗೊಂಡಿರುವುದು ಇದೀಗ ವಿವಾದಕ್ಕೀಡಾಗಿದೆ.
ಭೀಕರ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರೊಂದಿಗೆ ಇದ್ದು ಅಗತ್ಯ ನೆರವು ನೀಡುವ ಕಾರ್ಯ ಮಾಡಬೇಕಿದ್ದ ಕ್ಷೇತ್ರದ ಶಾಸಕರು ವಿದೇಶದಲ್ಲಿ ಸುತ್ತಾಡುತ್ತಿರುವುದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಾಸಕರು ಭೂತಾನ್ ಪ್ರವಾಸ ಕೈಗೊಂಡಿರುವುದು ಕ್ಷೇತ್ರದ ಜನರಲ್ಲಿ ಹಾಗೂ ರೈತರಲ್ಲಿ ಭಾರಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೈತರೊಬ್ಬರು ಬೈದು ಆಕ್ರೋಶ ವ್ಯಕ್ತಪಡಿಸಿರುವ ವೀಡಿಯೋ ವೈರಲ್ ಆಗಿದೆ.
ವೀಡಿಯೋ ಹರಿಬಿಟ್ಟಿರುವ ರೈತ ಮಲ್ಲಿಕಾರ್ಜುನ, ಜಿಲ್ಲೆಯಲ್ಲಿ ಈ ಬಾರಿ ಐದು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ಆದರೆ, ಯಾವ ಶಾಸಕರು ರೈತರ ನೆರವಿಗೆ ಬಂದಿಲ್ಲ. ಅಲ್ಲದೆ ರಾಣಿಬೆನ್ನೂರಿನ ಶಾಸಕರು ಕ್ಷೇತ್ರದಲ್ಲಿ ಬರವಿದ್ದರೂ ರೈತರಿಗೆ ಪರಿಹಾರ ಕೊಡಿಸುವ ಬದಲು ವಿದೇಶ ಟೂರ್ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿಯಿದೆ.ಕೇಂದ್ರದ ಮೇಲೆ ಆರೋಪ ಮಾಡುವ ಇವರು ಕೇಂದ್ರ ಸರ್ಕಾರದ ಎದುರು ಪ್ರತಿಭಟನೆ ಮಾಡಬೇಕಿತ್ತು. ಅದನ್ನು ಬಿಟ್ಟು ಮೋಜು, ಮಸ್ತಿ ಮಾಡಲು ವಿದೇಶ ಪ್ರಯಾಣ ಮಾಡಿರುವುದಕ್ಕೆ ಏನಂತಿರಿ ನೀವು. ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಬೇರೆ ಏನೂ ಇಲ್ಲ. ಇದನ್ನು ತಿಳಿದುಕೊಂಡು ಶಾಸಕರು ಟೂರ್ ಬಿಟ್ಟು ರೈತರಿಗೆ ಪರಿಹಾರ ಕೊಡಿಸಲು ನೋಡಬೇಕು. ಇಲ್ಲವಾದರೆ ರಾಣಿಬೆನ್ನೂರು ಶಾಸಕರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಧೈರ್ಯ ಹೇಳಬೇಕಿದ್ದ ಶಾಸಕರು:ತಾಲೂಕಿನಲ್ಲಿ ಬರಗಾಲ ಆವರಿಸಿ ಮುಂಗಾರು, ಹಿಂಗಾರು ಬೆಳೆಯಿಲ್ಲದೇ ರೈತರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಅಗತ್ಯ ನೆರವು, ಧೈರ್ಯ ಹೇಳುತ್ತ ಕುಡಿವ ನೀರು, ಜಾನುವಾರುಗಳಿಗೆ ಮೇವು ಇತ್ಯಾದಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದ್ದ ಶಾಸಕರು ತಮಗೆ ಬರಗಾಲಕ್ಕೆ ಸಂಬಂಧವಿಲ್ಲ ಎಂಬಂತೆ ಕುಟುಂಬ ಸಮೇತ ಭೂತಾನ್ ದೇಶದಲ್ಲಿ ಪ್ರವಾಸ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಮಳೆ ಕೊರತೆಯಿಂದ ಮೆಕ್ಕೆಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ ಸೇರಿ ಇತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ರಾಜ್ಯ ಸರ್ಕಾರ ಕೂಡ ರಾಣಿಬೆನ್ನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ, ಈವರೆಗೂ ತಾಲೂಕಿನ ಒಬ್ಬ ರೈತರಿಗೂ ಬೆಳೆ ಹಾನಿ ಪರಿಹಾರವಾಗಿ ನಯಾಪೈಸೆ ಹಣ ಬಾರದಿರುವುದು ಈ ಆಕ್ರೋಶಕ್ಕೆ ಕಾರಣ.ರೈತರ ಸಲುವಾಗಿ ನಾನು ಮೋಡ ಬಿತ್ತನೆ ಮಾಡಿದ್ದೇನೆ. ೨೮ ಗ್ರಾಪಂನಲ್ಲಿ ಭತ್ತದ ಬೆಳೆಗೆ ಔಷಧ ಸಿಂಡಪಣೆ ಮಾಡಲು ವ್ಯವಸ್ಥೆ ಮಾಡಿದ್ದೇನೆ. ನನ್ನ ಮದುವೆಯಾಗಿ ೨೫ ವರ್ಷವಾಗಿದೆ. ಆದ್ದರಿಂದ ನನ್ನ ಕುಟುಂಬದ ಒತ್ತಡದಿಂದ ಭೂತಾನ್ ಟೂರ್ ಬಂದಿದ್ದೇನೆ. ಇಲ್ಲಿಯೂ ರೈತರು, ನೇಕಾರರನ್ನು ಭೇಟಿ ಮಾಡಿ ಅಧ್ಯಯನ ಮಾಡಿದ್ದೇನೆ. ಆದರೆ, ಕೆಲವರು ಇದನ್ನು ಬಿಟ್ಟು ಬೇರೆ ಸುದ್ದಿ ಪ್ರಕಟ ಮಾಡಿದರೆ ನಾನೇನು ಮಾಡಲಿ ಎನ್ನುತ್ತಾರೆ ಶಾಸಕ ಪ್ರಕಾಶ ಕೋಳಿವಾಡ.
;Resize=(128,128))
;Resize=(128,128))
;Resize=(128,128))