ಜೂನ್‌ 30ರಂದು ಟಿಐಟಿ ಪರೀಕ್ಷೆ : ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ

| Published : Jun 26 2024, 12:36 AM IST

ಸಾರಾಂಶ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಜೂ.30ರಂದು ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಜೂ.30ರಂದು ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಸೂಚಿಸಿದರು.

ಮಂಗಳವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಪರೀಕ್ಷೆಯ ಮೊದಲ ಪತ್ರಿಕೆಗೆ 4,002 ಹಾಗೂ ಮಧ್ಯಾಹ್ನ ಪತ್ರಿಕೆಗೆ 6,026 ಸೇರಿ ಒಟ್ಟು 10,028 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಅಂದು ಬೆ.9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್-1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30ರ ವರೆಗೆ ಪೇಪರ್-2 ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿ ಅನ್ವಯ ಪರೀಕ್ಷೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಅಭ್ಯರ್ಥಿಗಳು ಬೆ.9 ಗಂಟೆ ಪರೀಕ್ಷೆ ಕೇಂದ್ರದಲ್ಲಿ ಒಳಗೆ ಇರಬೇಕು ಹಾಗೂ ಮಧ್ಯಾಹ್ನ 1.30 ಗಂಟೆಯ ಒಳಗೆ ಪರೀಕ್ಷೆ ಕೇಂದ್ರದಲ್ಲಿ ಇರಬೇಕು. ಅವಧಿ ಮೀರಿಬಂದರೆ ಅವಕಾಶ ವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಚ್‌ಗಳನ್ನು ಪ್ರವೇಶ ಕೇಂದ್ರಗಳೊಳಗೆ ನಿರ್ಬಂಧಿಸಬೇಕು. ಸೂಕ್ತವಾದ ಆಸನ ವ್ಯವಸ್ಥೆ, ಅಂಗವಿಕಲರಿಗೆ ಅನುಕೂಲಕರ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಪೂರ್ವಭಾವಿಯಾಗಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ತೆರಳಿ, ಆಸನ ವ್ಯವಸ್ಥೆ, ಸಿಸಿಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಪರೀಕ್ಷೆ ಶಾಂತಿಯುತವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರತಿ ಮಾರ್ಗಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ: ಅಂದು ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸೆಕ್ಷನ್ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವರೆಗೆ ಬೆ. 8 ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳು: ನಗರದ ಸಭಾ ಪಿಯು ಕಾಲೇಜು, ನ್ಯೂ ಕನ್ನಡ ಪ್ರೌಢಶಾಲೆ, ದೋಖಾ ಜೈನ್ ಸ್ಕೂಲ್, ಆರ್ ವಿ ಹೈಸ್ಕೂಲ್ ಹಾಗೂ ಪಿಯು ಕಾಲೇಜು, ಜವಾಹರ್ ಪ್ರೌಢಶಾಲೆ ಮತ್ತು ಪಿಯು ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಮತ್ತು ಮಹಿಳಾ ಪಿಯು ಹಾಗೂ ಹುಡುಗಿಯರ ಪ್ರೌಢಶಾಲೆ, ಡಾನ್ ಬಾಸ್ಕೋ ಪ್ರೌಢಶಾಲೆ ಹಾಗೂ ಪಿಯು ಕಾಲೇಜು, ಡಿಡಿಯು ಇಂಟರ್ ನ್ಯಾಷನಲ್ ಹೆಚ್.ಎಸ್., ನಿವೇದಿತಾ ಪಾಲಿಟೆಕ್ನಿಕ್ ಕಾಲೇಜು, ಆದರ್ಶ ವಿದ್ಯಾಲಯ, ಮಹತ್ಮಾಗಾಂಧಿ ಪ್ರೌಢಶಾಲೆ, ಚಿರಂಜೀವಿ ಪ್ರೌಢಶಾಲೆ, ಎಲ್.ಕೆ.ಇ.ಟಿ ಮಹಿಳಾ ಪಿಯು ಕಾಲೇಜು, ನವನಂದಿ ಹೈಸ್ಕೂಲ್, ಸ್ವಾಮಿ ವಿದ್ಯಾರಣ್ಯ ಹೆಚ್.ಪಿ.ಎಸ್ ಶಾಲೆ, ದಿವಂಗತ ತಿಮ್ಮಣ್ಣ ಹೆಡಗಿಮದ್ರಾ ಆಂಗ್ಲ ಮಾಧ್ಯಮ ಶಾಲೆ, ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಮಹಿಳಾ ಪದವಿ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ., ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ ಬಿ, ಡಿಡಿಪಿಐ ಮಂಜುನಾಥ, ಜಿಲ್ಲಾ ನೋಡಲ್ ಅಧಿಕಾರಿ ಬಸನಗೌಡ ಆಲ್ದಾಳ ಸೇರಿದಂತೆ ಪರೀಕ್ಷೆಗೆ ಜವಾಬ್ದಾರಿ ವಹಿಸಿದ ಇತರ ಇಲಾಖೆಯ ಅಧಿಕಾರಿಗಳು ಇದ್ದರು.