ಸಾರಾಂಶ
ತಾಕೇರಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಉತ್ಸವ ಆಚರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ತಾಕೇರಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಆಚರಿಸಲಾಯಿತು. ಗ್ರಾಮದಲ್ಲಿ ಕಟ್ಟುಪಾಡು ವಿಧಿಸಲಾಗಿತ್ತು.ಶಿರುಗೌಡನ ಕುಟುಂಬದ ಸೂರ್ಯಪ್ರಕಾಶ್ ಅವರ ಮನೆಯಲ್ಲಿರುವ ಭಂಡಾರದಿಂದ ಸುಗ್ಗಿದೇವರನ್ನು ಮಂಗಳವಾದ್ಯದ ಮೂಲಕ ಸುಗ್ಗಿಕಟ್ಟೆಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಸುಗ್ಗಿಯ ಹಿನ್ನೆಲೆ ಸುಗ್ಗಿ ಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು.
ನಂತರ ವೀಳ್ಯ ಚೆಲ್ಲುವುದು, ಹರಕೆ ಅರ್ಪಿಸುವುದು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಬ್ಬಮ್ಮ ದೇವರನ್ನು ತೊಟ್ಟಿಲಲ್ಲಿ ಕೂರಿಸಿ ಉಯ್ಯಾಲೆಯಲ್ಲಿ ತೂಗಿಸಲಾಯಿತು. ನಂತರ ದೇವರ ಮೂರ್ತಿಯನ್ನು ಮೆರವಣಿಗೆ ಮೂಲಕ ಮಂಗಳವಾದ್ಯದೊಂದಿಗೆ ಉಮಾಮಹೇಶ್ವರಿ ದೇವಾಲಯಕ್ಕೆ ಕರೆತಂದು ಸಾಂಪ್ರದಾಯಿಕವಾಗಿ ಪೂಜಿಸಲಾಯಿತು. ನಂತರ ದೇವರ ಮೂಲ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಭಕ್ತರು ಈಡುಗಾಡಿ ಒಡೆದು ಭಕ್ತಿ ಸಮರ್ಪಿಸಿದರು. ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರ್ಚಕ ಶ್ರೀರಾಮ್ ಪೂಜಾ ಕಾರ್ಯ ನೆರವೇರಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಪದಾಧಿಕಾರಿಗಳು ಇದ್ದರು.