ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ತಮಿಳುನಾಡು ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯೊಂದಿಗೆ ಹಾವೇರಿ ವಿಶ್ವವಿದ್ಯಾಲಯ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.ಮುಂದಿನ ದಿನಗಳಲ್ಲಿ ಹಾವೇರಿ ವಿಶ್ವವಿದ್ಯಾಲಯ ಹಾಗೂ ನಿಫ್ಟೆಮ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಎಂಟರ್‌ಪ್ರೈನರ್‌ಶಿಪ್ ಆ್ಯಂಡ್ ಮ್ಯಾನೇಜ್‌ಮೆಂಟ್, ತಂಜಾವೂರು) ಸಂಸ್ಥೆ ಪರಸ್ಪರ ಶೈಕ್ಷಣಿಕ, ಸಂಶೋಧನೆ, ಕೌಶಲ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಅವರು ಹಾಗೂ ನಿಫ್ಟೆಮ್ ಸಂಸ್ಥೆ ತಂಜಾವೂರಿನ ನಿರ್ದೇಶಕ ಡಾ. ವಿ. ಪಳನಿಮುತ್ತು ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮಹತ್ವದ ಒಪ್ಪಂದದಿಂದ ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಯುವಕ, ಯುವತಿಯರಿಗೆ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ನೂತನ ಬೆಳವಣಿಗೆಗಳನ್ನು ಅಧ್ಯಯನ ಮಾಡಲು, ಉದ್ಯೋಗಾವಕಾಶಕ್ಕೆ ಸಹಕಾರಿಯಾಗಲಿದೆ.ತಂಜಾವೂರಿನ ನಿಫ್ಟೆಮ್ ಸಂಸ್ಥೆಯೊಂದಿಗಿನ ಈ ನೂತನ ಒಪ್ಪಂದದಿಂದಾಗಿ ಹಿಂದುಳಿದ ಹಾವೇರಿ ಭಾಗದ ಯುವಕರು ಆಹಾರ ತಂತ್ರಜ್ಞಾನ, ಕೈಗಾರಿಕೆ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉನ್ನತ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಈ ರಾಷ್ಟ್ರೀಯ ಸಂಸ್ಥೆಯ ಒಪ್ಪಂದದಿಂದಾಗಿ ಆಹಾರ ಕ್ಷೇತ್ರದಲ್ಲಿನ ವಿನೂತನ ಸಂಶೋಧನೆಗೆ ಹೊಸ ದಿಕ್ಕು, ಹೊಸ ಆವಿಷ್ಕಾರ ಮತ್ತು ಉದ್ಯೋಗ ಸೃಷ್ಟಿಗೊಳ್ಳಲು ಸಾಧ್ಯವಾಗುತ್ತದೆ.
ಹಾವೇರಿ ವಿಶ್ವವಿದ್ಯಾಲಯ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಮಹತ್ವದ ಸಂಸ್ಥೆಯಾದ ನಿಫ್ಟೆಮ್‌ದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯದ ಕ್ರಿಯಾಶೀಲ ಮುನ್ನಡೆಗೆ ಇದು ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಮಹತ್ವದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಭಾಗದ ಸರ್ವಾಂಗೀಣ ಪ್ರಗತಿಗೆ ವಿಶ್ವವಿದ್ಯಾಲಯ ತನ್ನದೇ ಆದ ಕೊಡುಗೆ ನೀಡುವಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದ್ದಾರೆ.ಒಪ್ಪಂದದ ಸಂದರ್ಭದಲ್ಲಿ ಕೊಡುಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರು, ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಗಂಗಾಧರ, ಹಾಸನ ವಿವಿ ಕುಲಪತಿ ಪ್ರೊ. ತಾರಾನಾಥ, ಕೊಪ್ಪಳ ವಿವಿ ಕುಲಪತಿ ಪ್ರೊ. ರವಿ ಬಿ.ಕೆ., ಬಾಗಲಕೋಟೆ ವಿವಿಯ ಪ್ರೊ. ಆನಂದ ದೇಶಪಾಂಡೆ ಹಾಗೂ ತಂಜಾವೂರಿನ ನಿಫ್ಟೆಮ್ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.