ಸಾರಾಂಶ
ಶಿಗ್ಗಾಂವಿ: ಶಿಗ್ಗಾಂವಿ ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದ ಯಾತ್ರೆ ಆರಂಭಿಸಿದ್ದು, ಇದು ಯಾವುದೇ ರಾಜಕೀಯ ಯಾತ್ರೆಯಲ್ಲ. ಮುಂದಿನ ಚುನಾವಣೆಗೂ ಈ ಯಾತ್ರೆಗೂ ಸಂಬಂಧವಿಲ್ಲ. ನಮ್ಮ ನಿಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಶಾಶ್ವತಗೊಳಿಸಲು ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಶಿಗ್ಗಾಂವಿ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಮುತ್ತಳ್ಳಿ, ತಡಸ, ಅಡವಿ ಸೋಮಾಪುರ, ಕುನ್ನೂರು, ಶ್ಯಾಡಂಬಿ, ಮಡಿ ಗ್ರಾಮಗಳಲ್ಲಿ ಶುಕ್ರವಾರ ಆರಂಭಿಸಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಶಾಸಕನಾಗಿಯೇ ನಿಮ್ಮ ಸೇವೆ ಮಾಡಬೇಕೆಂದೇನಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ಧನಿದ್ದೇನೆ. ನಾನು ಶಾಸಕನಲ್ಲದಿದ್ದರೂ ನಿಮ್ಮ ಸೇವೆ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ನೀವು ನನಗೆ ನೀಡಿದ್ದೀರಿ ಎಂದು ಹೇಳಿದರು.
ತಡಸ ಗ್ರಾಮ ಮೂರು ತಾಲೂಕುಗಳ ಕೇಂದ್ರ ಬಿಂದುವಾಗಿದೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಎಲೆಕ್ಟ್ರಿಕ್ ಸಮಸ್ಯೆ ಇತ್ತು. ದೊಡ್ಡ ಮಳೆಯಾದರೆ ಮನೆಯೊಳಗೆ ನೀರು ಬರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿ ಊರಿಗೆ ಬಸ್ ನಿಲ್ದಾಣ, ಹೈಸ್ಕೂಲು, ಕಾಲೇಜು ಎಲ್ಲವನ್ನೂ ನಿಮ್ಮ ಸಹಕಾರದಿಂದ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಬರುವ ದಿನಗಳಲ್ಲಿ ಈ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಬೇಕು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಮುಂದುವರೆಯುತ್ತಿರುವ ತಾಲೂಕು ಎಂಬ ಹಣೆ ಪಟ್ಟಿಗೆ ಬದಲಾಯಿಸಲಾಗಿದೆ. ವರದಾ ನದಿಯಿಂದ ತಡಸದ ಕೆರೆಗೆ ನೀರು ಹರಿಸುವ ಕುರಿತು ನಮ್ಮ ಹಿರಿಯರು ಯಾರೂ ಯೋಚನೆ ಮಾಡಿರಲಿಲ್ಲ. ಯಾವುದು ಅಸಾಧ್ಯವಾಗಿತ್ತೋ ಅದನ್ನು ನಾನು ಮಾಡಿ ತೋರಿಸಿದ್ದೇನೆ. ವರದಾ ನದಿಯ ನೀರನ್ನು ತಡಸ ಕೆರೆಗೆ ಹರಿಸಿದ್ದೇವೆ ಎಂದು ಹೇಳಿದರು.ಪ್ರಮುಖರಾದ ಶ್ರೀಕಾಂತ ದುಂಡಿಗೌಡರ, ಶಿವಾನಂದ ಮ್ಯಾಗೇರಿ ಇತರರು ಇದ್ದರು.