ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ಸುಮಲತಾ ಅಂಬರೀಶ್‌ಗೆ ಕೃತಜ್ಞತೆ

| Published : Apr 04 2024, 01:06 AM IST

ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ಸುಮಲತಾ ಅಂಬರೀಶ್‌ಗೆ ಕೃತಜ್ಞತೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಮಂಡ್ಯಕ್ಕೆ ಆಗಮಿಸಿ ಅರ್ಕೇಶ್ವರ, ಶ್ರೀಕಾಳಿಕಾಂಭ, ಲಕ್ಷ್ಮಿಜನಾರ್ಧನ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿ ಬಳಿಕ ಮಂಡ್ಯದ ಡಿಸಿ ಕಚೇರಿಯಲ್ಲಿ ಬೆಳಗ್ಗೆ 11.05ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ದೊಡ್ಡಮಟ್ಟದಲ್ಲಿ ಬಿಸಿಲು ಇರುವುದರಿಂದ ರೋಡ್ ಶೋ ಬೇಡವೆಂದು ತೀರ್ಮಾನಿಸಿ ಮಂಡ್ಯದ ವಿವಿ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಪರವಾಗಿ ಅವರ ಜೀವಿತ ಅವಧಿಯಲ್ಲಿ ಹೋರಾಟ ಮಾಡಿರುವಂತಹ ಪ್ರಮುಖ ನಾಯಕರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ಅವರನ್ನು ಸ್ಮರಿಸಬೇಕು ಎನ್ನುವ ಉದ್ದೇಶದಿಂದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ಪೂಜೆಸಲ್ಲಿಸಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅಲ್ಲದೇ, ಜಿಲ್ಲೆಯ ಪ್ರಮುಖರು, ಹಿರಿಯರಾದ ಚೌಡಯ್ಯ, ಕೆ.ವಿ.ಶಂಕರೇಗೌಡ್ರು, ಜಿ.ಮಾದೇಗೌಡ, ಎಸ್.ಡಿ.ಜಯರಾಂ ಹಾಗೂ ಅಂಬರೀಶ್ ಅವರ ಸಮಾಧಿಗಳಿಗೆ ಪೂಜೆಸಲ್ಲಿಸಿ, ಗೌರವಿಸುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.

ಇಂದು ನಾಮಪತ್ರ ಸಲ್ಲಿಕೆ:

ಗುರುವಾರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಮಂಡ್ಯಕ್ಕೆ ಆಗಮಿಸಿ ಅರ್ಕೇಶ್ವರ, ಶ್ರೀಕಾಳಿಕಾಂಭ, ಲಕ್ಷ್ಮಿಜನಾರ್ಧನ ದೇವಸ್ಥಾನಕ್ಕೆ ತೆರಳಿ ಪೂಜೆಸಲ್ಲಿಸಿ ಬಳಿಕ ಮಂಡ್ಯದ ಡಿಸಿ ಕಚೇರಿಯಲ್ಲಿ ಬೆಳಗ್ಗೆ 11.05ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ದೊಡ್ಡಮಟ್ಟದಲ್ಲಿ ಬಿಸಿಲು ಇರುವುದರಿಂದ ರೋಡ್ ಶೋ ಬೇಡವೆಂದು ತೀರ್ಮಾನಿಸಿ ಮಂಡ್ಯದ ವಿವಿ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಹಾಗಾಗಿ ನನ್ನ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಬೆಳಗ್ಗೆ 10 ಗಂಟೆಗೆ ಆಗಮಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಬಳಿಕ ಅವರನ್ನು ಪ್ರಚಾರ ಆಹ್ವಾನಿಸುತ್ತೇವೆ. ನಾನು ಸೇರಿದಂತೆ ಎಲ್ಲರಿಗೂ ಕೇಂದ್ರದಲ್ಲಿ ಬಿಜೆಪಿ 400 ಸೀಟ್ ಗೆಲ್ಲಬೇಕು ಎನ್ನುವುದು ಮಹದಾಸೆಯಾಗಿದೆ ಎಂದರು.

ಸುಮಲತಾ ಅವರು ಬಿಜೆಪಿ ಪಕ್ಷ ಸೇರ್ಪಡೆಯಾದ ಬಳಿಕ ನಾನು ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಹಾಲಿ ಸಂಸದರಾಗಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಕ್ಕೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ಮಾಜಿ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಜಿಪಂ ಮಾಜಿ ಸದಸ್ಯ ವಿಜಯಾನಂದ, ಮೈಸೂರು ಮಾಜಿ ಮೇಯರ್ ರವಿಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಮುಖಂಡರಾದ ಸಿ.ಶಿವಕುಮಾರ್, ಗವೀಗೌಡ ಪ್ರವಿಣ್, ಚೇತನ್, ಶಿಂಢಭೋಗಹಳ್ಳಿ ನಾಗಣ್ಣ, ಬೊಮ್ಮರಾಜು, ಮಾಣಿಕ್ಯನಹಳ್ಳಿ ಅಶೋಕ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.