ಸಾರಾಂಶ
ಲಕ್ಷ್ಮೇಶ್ವರ: ಪುರಸಭೆ ಸಾಮಾನ್ಯ ಮೂಲ ಅನುದಾನದ ಮುಕ್ತ ನಿಧಿಯಲ್ಲಿ ₹ 76 ಲಕ್ಷಗಳನ್ನು 2 ಪ್ಯಾಕೇಜ್ ರಸ್ತೆ ಕಾಮಗಾರಿಗೆ ಟೆಂಡರ್ ಕರೆದಿದ್ದು, ಸದರಿ ಟೆಂಡರ್‌ನ್ನು ರದ್ದುಪಡಿಸಿ ಹೊಸದಾಗಿ ಪರಿಷ್ಕೃತ ಕ್ರೀಯಾ ಯೋಜನೆ ತಯಾರಿಸಿ ಟೆಂಡರ್ ಕರೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಒಕ್ಕೋರಲ ಅಭಿಪ್ರಾಯ ಮಂಡಿಸಿದ ಘಟನೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಸದಸ್ಯರು ₹ 76 ಲಕ್ಷಗಳ ಟೆಂಡರ್ ರದ್ದು ಪಡಿಸುವಂತೆ ಕಾಂಗ್ರೆಸ್ ಸದಸ್ಯರು ಹಾಗೂ ರದ್ದು ಪಡಿಸದಂತೆ ಬಿಜೆಪಿ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಸಿದ ಪರಿಣಾಮ ಸಭೆಯಲ್ಲಿ ಕಾವೇರಿದ ವಾತಾವರಣ ಕಂಡು ಬಂದಿತು.ಕಾಂಗ್ರೆಸ್ ಸದಸ್ಯ ರಾಜಣ್ಣ ಕುಂಬಿ ಹಾಗೂ ಬಸವರಾಜ ಓದುನವರ ಹಾಗೂ ಜೆಡಿಎಸ್ ಸದಸ್ಯ ಪ್ರವೀಣ ಬಾಳಿಕಾಯಿ, ಬಿಜೆಪಿಯ ಸದಸ್ಯೆ ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ ಅವರುಗಳ ನಡುವೆ ಬಿಸಿ ಬಿಸಿ ಮಾತಿನ ಚರ್ಚೆ ನಡೆಯಿತು.
ಕಾಂಗ್ರೆಸ್ ಸದಸ್ಯ ರಾಜಣ್ಣ ಕುಂಬಿ ಮಾತನಾಡಿ, ಈ ಹಿಂದೆ ಕರೆದಿರುವ ಟೆಂಡರ್ ಒಂದು ಸೀಮಿತ ಪ್ರದೇಶದಲ್ಲಿ ನಡೆಯುವ ಕಾಮಗಾರಿ ರದ್ದು ಪಡಿಸಿ ಪಟ್ಟಣದ ಪ್ರಮುಖ ಬಜಾರ್ ರಸ್ತೆಯ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು, ಅದನ್ನು ದೂದಪೀರಾಂ ದರ್ಗಾದವರಗೆ ಪೂರ್ಣಗೊಳಿಸುವುದರಿಂದ ಪಟ್ಟಣಕ್ಕೆ ಪ್ರತಿನಿತ್ಯ ಬಂದು ಹೋಗುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದ್ದರಿಂದ ಈ ಹಿಂದಿನ ಟೆಂಡರ್ ರದ್ದುಪಡಿಸಿ ನೂತನ ಕ್ರೀಯಾ ಯೋಜನೆ ಸಿದ್ಧಪಡಿಸಿ ಮತ್ತೊಮ್ಮೆ ಟೆಂಡರ್ ಕರೆಯುವಂತೆ ಆಗ್ರಹಿಸಿದರು.ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಈ ಹಿಂದೆ ಕರೆದಿರುವ ಟೆಂಡರ್ ರದ್ದು ಪಡಿಸುವ ಬದಲು ಈಗ ಆ ಕಾಮಗಾರಿಯನ್ನು ಮಾಡಿ ಮುಗಿಸಿ ಮುಂದೆ ಬರುವ ಸಾಮಾನ್ಯ ನಿಧಿಯಲ್ಲಿ ಅಥವಾ ಶಾಸಕರ ಅನುದಾನದಲ್ಲಿ ಬಜಾರ್ ರಸ್ತೆಯ ಅರ್ಧ ಕಾಮಗಾರಿ ಮಾಡಿ ಮುಗಿಸೋಣ ಎಂದು ಆಗ್ರಹಿಸಿದರು.
ಇದಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಿಕಿ ನಡೆಯಿತು. ಈ ವೇಳೆ ಪುರಸಭೆಯು ಕೆಲ ಹೊತ್ತು ಗೊಂದಲ ಗೂಡಾಗಿದ್ದು ಕಂಡು ಬಂದಿತು.ನಂತರ ಕಾಂಗ್ರೆಸ್ ಸದಸ್ಯರು ಒಮ್ಮತ ನಿರ್ಣಯ ತೆಗೆದುಕೊಂಡು ಹಿಂದಿನ ಟೆಂಡರ್ ರದ್ದು ಪಡಿಸುವ ನಿರ್ಣಯ ಮಂಡಿಸಿದರು.ಇದಕ್ಕೆ ವಿರೋಧಿಸಿದ ಬಿಜೆಪಿ ಸದಸ್ಯರು ಟೆಂಡರ್ ರದ್ದು ಪಡಿಸಬಾರದು ಎಂದು ನಿರ್ಣಯ ಮಂಡಿಸಿದರು. ಬಿಜೆಪಿ ಸದಸ್ಯರು ಮಂಡಿಸಿದ ನಿರ್ಣಯ ಬಹುಮತ ಇಲ್ಲದೆ ಇರುವುದರಿಂದ ಬಿದ್ದು ಹೋಗಿದೆ ಎಂದು ಅಧ್ಯಕ್ಷರು ಘೋಷಣೆ ಮಾಡಿದರು.
ಈ ವೇಳೆ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಪೈಪ್‌ಗಳು ಶಿಥಿಲಗೊಂಡಿರುವುದರಿಂದ ಅವುಗಳನ್ನು ಬದಲಿಸಿ ಹೊಸ ಪೈಪ್ ಲೈನ್ ಕಾಮಗಾರಿ ಆರಂಭಿಸುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಾಗಿ ರಾಜಣ್ಣ ಕುಂಬಿ ಹೇಳಿದರು.ಸಭೆಯಲ್ಲಿ ಉಪಾಧ್ಯಕ್ಷ ಪಿರ್ಧೋಶ ಆಡೂರ, ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಸಾಹೀಬ್ ಜಾನ್ ಹವಾಲ್ದಾರ್ , ಮಂಜವ್ವ ನಂದೆಣ್ಣವರ, ರಾಮು ಗಡದವರ, ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಸಿಂಕದರ್ ಕಣಕೆ. ವಿಜಯ ಕರಡಿ, ಕವಿತಾ ಶರಸೂರಿ, ಪೂಜಾ ಕರಾಟೆ, ಮಹಾದೇವಪ್ಪ ಅಣ್ಣಿಗೇರಿ ಇದ್ದರು. ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಸಭೆಗೆ ಎಲ್ಲರನ್ನು ಸ್ವಾಗತಿಸಿದರು. ಹನಮಂತಪ್ಪ ನಂದೆಣ್ಣವರ ನಿರ್ವಹಿಸಿದರು. ಪುರಸಭೆಯ ಎಂಜಿನೀಯರ್ ಖಾಟೇವಾಲೆ, ಅಜ್ಜಣ್ಣವರ, ಹೂಗಾರ ಸೇರಿದಂತೆ ಅನೇಕರು ಇದ್ದರು.