ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಷ್ಠಿತ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದು ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಖ್ಯಾತ ನಟ ಜಬ್ಬಾರ್ ಪಟೇಲ್, ಬಾಂಗ್ಲಾ ನಟಿ ಅಜಮೇರಿ ಬಂದೋನ್, ಜೆಕ್ ವಿಮರ್ಶಕಿ ವಿಯರಾ ಲ್ಯಾಂಗರೋವಾ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ಉದ್ಘಾಟನಾ ಚಲನಚಿತ್ರವಾಗಿ ಪೀಟರ್ ಲೂಸಿ ನಿರ್ದೇಶನದ ಸ್ವಿಸ್ ಚಲನಚಿತ್ರ ಬೋಂಜೋರ್ ಸ್ವಿಜರ್‌ಲ್ಯಾಂಡ್ ಪ್ರದರ್ಶನಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮೂರು ಬಾರಿ ಗ್ಯಾಮಿ ಪ್ರಶಸ್ತಿ ಪಡೆದ ರಿಕ್ಕಿ ಕೇಜ್ ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.
ಈ ಚಿತ್ರೋತ್ಸವದಲ್ಲಿ ಅಬ್ಬಾಸ್ ಕಿರೋಸ್ತಮಿ ಹಾಗೂ ಮೃಣಾಲ್ ಸೇನ್ ನಿರ್ದೇಶನದ ಚಿತ್ರಗಳು ಪುನರಾವಲೋಕನ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.
ಕನ್ನಡ, ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ವಿಮರ್ಶಕರ ವಾರ, ಸಾಕ್ಷ್ಯಚಿತ್ರ ವಿಭಾಗ, ಜೀವನ ಚರಿತ್ರೆ, ಸಂಸ್ಮರಣೆ- ಹೀಗೆ ಹಲವು ವಿಭಾಗಗಳಲ್ಲಿ ಸುಮಾರು 50ಕ್ಕೂ ಹೆಚ್ಚು ದೇಶಗಳ 200 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.
ಖ್ಯಾತ ನಟ ಧನಂಜಯ್ ಚಿತ್ರೋತ್ಸವದ ಅಧಿಕೃತ ರಾಯಬಾರಿಯಾಗಿ ಆಯ್ಕೆಯಾಗಿದ್ದಾರೆ. ಒರಾಯನ್ ಮಾಲ್, ಸುಚಿತ್ರಾ ಸಿನಿಮಾ ಅಕಾಡೆಮಿ, ಕಲಾವಿದರ ಸಂಘಗಳ 14 ಪರದೆಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಕನ್ನಡ ಚಿತ್ರರಂಗಕ್ಕೆ 90 ವರ್ಷ ತುಂಬಿದ ಪ್ರಯುಕ್ತ ಕನ್ನಡ ವಿಶೇಷ ವಿಭಾಗದಲ್ಲಿ 30 ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕ
ಳೆದ ವರ್ಷ ಅಗಲಿದ ಲೀಲಾವತಿ, ಭಗವಾನ್, ಸಿವಿ ಶಿವಶಂಕರ್ ಹಾಗೂ ವಾಣಿಜಯರಾಂ ಗೌರವಾರ್ಥ ಅವರ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಿತ್ರೋತ್ಸವಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಚಿತ್ರೋತ್ಸವದ ಪಾಸುಗಳು ಹಂಚಿಕೆಯಾಗಿವೆ.