ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳಾದೇವಿ ಪರಿಸರದಲ್ಲಿ ಬುಧವಾರ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ 2ನೇ ಆವೃತ್ತಿಯ ಸ್ವಚ್ಛ ಮಂಗಳೂರು ಅಭಿಯಾನ ಸಂಪನ್ನಗೊಂಡಿತು.ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಅರುಣ್ ಐತಾಳ್, ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲ ಪ್ರತಿಜ್ಞಾ ಸುಹಾಸಿನಿ, ಪರಿಸರ ಪ್ರೇಮಿ ಅರ್ಜುನ್ ಮಸ್ಕರೇನಸ್ ಹಾಗೂ ಮಂಗಳಾದೇವಿ ಸೇವಾ ಸಮಿತಿ ಖಜಾಂಚಿ ವಿಶ್ವನಾಥ್ ಅವರು ಮಂಗಳಾದೇವಿ ದೇವಸ್ಥಾನದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.ಸ್ವಯಂ ಸೇವಕರಾದ ದಾಮೋದರ್ ನಾಯಕ್, ಅವಿನಾಶ್ ಅಂಚನ್, ಅಚಲ್, ವಿಜೇಶ್ ದೇವಾಡಿಗ, ಬಾಲಕೃಷ್ಣ ಭಟ್, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ಕೆ. ನೇತೃತ್ವದಲ್ಲಿ ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ಎನ್ನೆಸ್ಸೆಸ್ ಯೋಜನಾಧಿಕಾರಿ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕ ನವೀನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡವು ಮಂಗಳಾದೇವಿ ರಥಬೀದಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಮಂಗಳಾದೇವಿ ಸೇವಾ ಸಮಿತಿ ಸದಸ್ಯರು, ಅಂಬಾ ಮಹೇಶ್ವರಿ ಸೇವಾ ಸಮಿತಿಯ ಸದಸ್ಯರು ಹಾಗೂ ರಾಮಕೃಷ್ಣ ಮಿಷನ್‌ನ ನಿವೇದಿತಾ ಬಳಗದ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಿದರು.ಸ್ವಯಂ ಸೇವಕರಾದ ಅಭಿಷೇಕ್ ವಿ. ಸುಧಾಕರ್, ಉದಯ್ ಕೆ.ಪಿ., ತಾರಾನಾಥ್ ಆಳ್ವ, ಸುನಂದಾ ಶಿವರಾಮ್, ಶಿವರಾಮ್ ನೇತೃತ್ವದಲ್ಲಿ ಎಜೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳಾದೇವಿಯಿಂದ ಪಾಂಡೇಶ್ವರ ಕಡೆಗೆ ತೆರಳುವ ರಸ್ತೆಯನ್ನು ಪೌರಕಾರ್ಮಿಕರ ಜತೆಗೂಡಿ ಸ್ವಚ್ಛಗೊಳಿಸಿದರು.
ಕ್ಯಾ. ಗಣೇಶ್ ಕಾರ್ಣಿಕ್, ಮಂಗಳಾದೇವಿ ಸೇವಾ ಸಮಿತಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ಕಾರ್ಯದರ್ಶಿಗಳಾದ ತಿಲಕ್‌ರಾಜ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ.ವಿ., ಉಮಾನಾಥ್ ಕೋಟೆಕಾರ್, ರಂಜನ್ ಬೆಳ್ಳರ್ಪ್ಪಾಡಿ ಇದ್ದರು.ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಹಾಗೂ ಸೈಟ್ ಅಲೋಶಿಯಸ್ ಸಂಸ್ಥೆ ಸಹಯೋಗದಲ್ಲಿ ಉಚಿತ ಹಣ್ಣಿನ ಸಸಿಗಳ ವಿತರಣಾ ಕಾರ್ಯಕ್ರಮವು ಆಶ್ರಮದ ಆವರಣದಲ್ಲಿ ನಡೆಯಿತು.12 ತಿಂಗಳ ಸ್ವಚ್ಛತಾ ಯಜ್ಞ:2023ರ ಅ.2ರಂದು ಸ್ವಚ್ಛಾಂಜಲಿ ಎಂಬ ಕಾರ್ಯಕ್ರಮದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ಆರಂಭಗೊಂಡ 2ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ನಿರಂತರವಾಗಿ 12 ತಿಂಗಳ ಕಾಲ ಜನಾಂದೋಲನವಾಗಿ ನಡೆಯಿತು. ಮೊದಲ ಅಭಿಯಾನವು ಹಂಪನಕಟ್ಟೆ ಕ್ಲಾಕ್ ಟವರ್ ಬಳಿ ಆರಂಭಗೊಂಡು ನಗರದ ವಿವಿಧೆಡೆ ನಿರಂತರವಾಗಿ ಪ್ರತಿ ತಿಂಗಳ 2ನೇ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು. ಇದರ ಜತೆಜತೆಗೆ ನಗರದ ವಿವಿಧ ಭಾಗಗಳಲ್ಲಿ ಸುಮಾರು 5 ಸಾವಿರ ಮನೆಗಳು ಒಳಗೊಂಡಂತೆ ರಿಕ್ಷಾ, ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವೂ ನಡೆದಿತ್ತು.