ಆದಿಚುಂಚನಗಿರಿಯಲ್ಲಿ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಶ್ರೀಗಳಿಂದ ವಿಧ್ಯುಕ್ತ ಚಾಲನೆ

| Published : Mar 09 2025, 01:49 AM IST

ಸಾರಾಂಶ

ದೇಹದ ಪರಿಪೂರ್ಣ ಸಮರ್ಥತೆಗೆ ಸ್ವಾಸ್ಥ್ಯ ಮನಸ್ಸಿರಬೇಕು. ಇವೆಲ್ಲವೂ ಕ್ರೀಡೆಯಿಂದ ಸಿಗುತ್ತವೆ. ಹಾಗಾಗಿ ಕ್ರೀಡೆಗೆ ಹೆಚ್ಚು ಒತ್ತು ಕೊಡುವ ಜೊತೆಗೆ ದೇಶಿಯ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಧರ್ಮಧ್ವಜ ಸ್ಥಾಪನೆ ಮತ್ತು ನಾಂದಿ ಪೂಜೆ ಮಾಡುವ ಮೂಲಕ 9 ದಿನಗಳ ಕಾಲ ನಡೆಯುವ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಹಿಂದೂ ಧರ್ಮದಲ್ಲಿ ಧರ್ಮ ಎಂಬುದು ಅತೀ ಪಾವಿತ್ರ್ಯವನ್ನು ಹೊಂದಿದೆ. ಶ್ರೀಕ್ಷೇತ್ರದಲ್ಲಿ ಧರ್ಮ ಅಚ್ಚಳಿಯದೆ ಉಳಿದು ಧರ್ಮದ ನೆಲೆಗಟ್ಟಿನಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂಬ ಪ್ರತೀಕವಾಗಿ ಪೂರಕವಾಗಿ ಧರ್ಮಧ್ವಜ ಸ್ಥಾಪನೆ ಮಾಡುವ ಮೂಲಕ 9 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಬಿಜಿಎಸ್ ಕ್ರೀಡೋತ್ಸವಕ್ಕೆ ಚಾಲನೆ:

ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜಿಎಸ್ ಕ್ರೀಡೋತ್ಸವವನ್ನು ನಿರ್ಮಲಾನಂದನಾಥಶ್ರೀಗಳು ಉದ್ಘಾಟಿಸಿ ಮಾತನಾಡಿ, ದೇಹದ ಪರಿಪೂರ್ಣ ಸಮರ್ಥತೆಗೆ ಸ್ವಾಸ್ಥ್ಯ ಮನಸ್ಸಿರಬೇಕು. ಇವೆಲ್ಲವೂ ಕ್ರೀಡೆಯಿಂದ ಸಿಗುತ್ತವೆ. ಹಾಗಾಗಿ ಕ್ರೀಡೆಗೆ ಹೆಚ್ಚು ಒತ್ತು ಕೊಡುವ ಜೊತೆಗೆ ದೇಶಿಯ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಬಹುದು ಎಂದರು.

ದೇಶಿಯ ಕ್ರೀಡೆಗಳು ಪ್ರಕೃತಿಯ ಜೊತೆಯಲ್ಲೇ ಆಡುವಂತಹ ಆಟಗಳು. ಇದಕ್ಕೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭೆಗಳು ಹೊರ ಹೊಮ್ಮಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿಯನ್ನು ತರಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಭಾರತೀಯ ಕಬ್ಬಡಿ ಕ್ರೀಡಾಪಟು ಬಿ.ಸಿ.ರಮೇಶ್, ಭಾರತೀಯ ವಾಲಿಬಾಲ್ ಕ್ರೀಡಾಪಟು ಕು.ಕೆ.ಎಂ.ಹಾಣಿ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು, ಕ್ರೀಡಾಭಿಮಾನಿಗಳು ಮತ್ತು ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಮಾ.10,11 ರಂದು ಮುದ್ದಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ದೇವಲಾಪುರ: ಭೀಮನಹಳ್ಳಿಯಲ್ಲಿ ಮಾ.10 ಮತ್ತು 11 ರಂದು ಶ್ರೀ ಕ್ಷೇತ್ರ ಉದ್ಭವ ಶ್ರೀ ಮುದ್ದಲಿಂಗೇಶ್ವರ ಸ್ವಾಮಿಯ 28ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ. ಎರಡು ದಿನ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಲಿದ್ದಾರೆ ಎಂದು ಗ್ರಾಮಸ್ಥರು, ದೇಗುಲದ ಪ್ರಮುಖರು ತಿಳಿಸಿದ್ದಾರೆ.