ಸಾರಾಂಶ
ಸಂಕೇಶ್ವರ : 31 ವರ್ಷದ ಹಿಂದೆ ಸ್ಫೋಟಕ ವಸ್ತು ಇದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಕೇಶ್ವರ ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಕರೋಶಿ ಗ್ರಾಮದ ಅಶೋಕ ವಸಂತ ಕುಲಕರ್ಣಿ(53) ಬಂಧಿತ ಆರೋಪಿ. ಮೂರು ದಶಕಗಳ ಹಿಂದೆ ಬಾವಿಯೊಳಗಿನ ಕಲ್ಲು ಒಡೆಯಲು ಬಳಸುತ್ತಿದ್ದ ಜೆಲೆಟಿನ್ ಮಾದರಿಯ ಸ್ಫೋಟಕ ಇರುವುದು ಪತ್ತೆಯಾಗಿತ್ತು.
ಈತನ ವಿರುದ್ಧ ಸಂಕೇಶ್ವರ ಠಾಣೆಯಲ್ಲಿ 1993ರಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನೆಲೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆ.23ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಕಾಕ ಉಪವಿಭಾಗದ ಡಿ.ಎಸ್ ಪಿ ಡಿಎಚ್ ಮುಲ್ಲಾ ಮಾರ್ಗದರ್ಶನದಲ್ಲಿ ಸಿಪಿಐ, ಎಸ್.ಎಂ.ಅವಜಿ ನೇತೃತ್ವದಲ್ಲಿ ಸಿಬ್ಬಂದಿ ಕೆ.ಬಿ.ಕಂಠಿ, ಎಸ್. ಬೇವಿನಕಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಂಕೇಶ್ವರ ಠಾಣೆ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.