ಯಾಮಾರಿಸಿ ಚಿನ್ನಾಭರಣ ಕದ್ದಿದ್ದ ಆರೋಪಿ ಬಂಧನ

| Published : Jun 28 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ: ತಾಲೂಕಿನ ಸಂಗೊಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಯಾಮಾರಿಸಿ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಎರಡೇ ದಿನದಲ್ಲಿ ಪತ್ತೆ ಮಾಡುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಲಕ್ಷ್ಮಣ ಅವಪ್ಪ ಸವಸುದ್ದಿ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹ 1.05 ಲಕ್ಷ ಮೌಲ್ಯದ ಚಿನ್ನದ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ:

ತಾಲೂಕಿನ ಸಂಗೊಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಯಾಮಾರಿಸಿ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಎರಡೇ ದಿನದಲ್ಲಿ ಪತ್ತೆ ಮಾಡುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಲಕ್ಷ್ಮಣ ಅವಪ್ಪ ಸವಸುದ್ದಿ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹ 1.05 ಲಕ್ಷ ಮೌಲ್ಯದ ಚಿನ್ನದ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಹಿನ್ನಲೆ:

ಕಲಭಾಂವಿ ಗ್ರಾಮದ ಸಾವಕ್ಕ ಮುದ್ದಪ್ಪ ಚಿಕ್ಕನ್ನವರ (70) ಅವರು ಜೂ.25 ರಂದು ಬೆಳಗ್ಗೆ ಕಲಭಾಂವಿ ಗ್ರಾಮದಿಂದ ಸಂಗೊಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಔಷಧ ತೆಗೆದುಕೊಂಡು ಬರಲು ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಬೈಕ್‌ನಲ್ಲಿ ಬಂದು ನಯವಾಗಿ ಮಾತನಾಡಿಸಿ ಆಸ್ಪತ್ರೆಗೆ ಬಿಡುವುದಾಗಿ ಬೈಕ್‌ ಹತ್ತಿಸಿಕೊಂಡಿದ್ದ. ನಂತರ ಆಸ್ಪತ್ರೆ ಬಳಿ ತೆರಳಿ ನಿಮ್ಮ ಹತ್ತಿರವಿರುವ ಒಂದು ಸರ್ ಕೊಡಿ ಇಂತಹದನ್ನು ಮಾಡಿಸಲಿಕ್ಕೆ ಹೊರಟಿದ್ದೇನೆ ಎಂದು ಯಾಮಾರಿಸಿದ್ದ. ಅಲ್ಲದೇ, ಮಹಿಳೆಯ ಕೊರಳಲ್ಲಿದ್ದ ಬಂಗಾರದ ಮೇಲಗುಂಡ ಸರ ಮತ್ತು ಕಿವಿಯಲ್ಲಿನ ಬಂಗಾರದ ಹೂವಿನ ಆಭರಣಗಳನ್ನು ಮೋಸದಿಂದ ತೆಗೆದುಕೊಂಡು ಪರಾರಿಯಾಗಿದ್ದ. ಬಳಿಕ ಆತ ವಂಚಿಸಿದ್ದಾನೆ ಎಂದು ಗೊತ್ತಾದ ಬಳಿಕ ಸಾವಕ್ಕ ಚಿಕ್ಕನ್ನವರ ಈ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಪಿ.ವಿ.ಸಾಲಿಮಠ ಮಾರ್ಗದರ್ಶನದಲ್ಲಿ ಪಿಎಸ್‌ಐ ಗುರುರಾಜ ಕಲಬುರ್ಗಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಯು.ಮೆಣಸಿನಕಾಯಿ, ಎಂ.ಎಸ್.ವಸ್ತ್ರದ, ಎಂ.ಎಸ್.ದೇಶನೂರ, ಸಿ.ಎಸ್.ಬುದ್ನಿ, ಜೆ.ಆರ್.ಮಳಗಲಿ ಹಾಗೂ ಟೆಕ್ನಿಕಲ್ ವಿಭಾಗದ ವಿನೋದ ಠಕ್ಕನವರ ಒಳಗೊಂಡ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.