ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬದುಕಿ ಬದುಕಿಸಿ ಸಮಾಜ ಕಟ್ಟುವ ಕಾಯಕ ಮಾಡಿದ ಈ ನೆಲದ ಮಣ್ಣಿನ ಮಕ್ಕಳು ಜನಪದರು. ಸಾಹಿತ್ಯಾತ್ಮಕವಾಗಿ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಮೌಖಿಕ ಪರಂಪರೆಯಲ್ಲಿ ಬಿತ್ತರಿಸಿ ಅನುಸರಣೀಯ ಜೀವನಕ್ಕೆ ಮೆಟ್ಟಿಲಾದವರು ಜನಪದರೆ, ಅವರ ಸಾಧನೆ ಅನನ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕು ಎಂದು ಸರ್ವಪಲ್ಲಿ ರಾಧಾಕೃಷ್ಣ ಪ್ರಶಸ್ತಿ ಪುರಸ್ಕೃತ ಬಾಗಳಿ ಮಹೇಶ್ ಹೇಳಿದರು.ಹೊಸವಾಡಿ ವೀರಭದ್ರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕೆಸ್ತೂರು ಗ್ರಾಮದ ಶಿವಕುಮಾರ ಸ್ವಾಮಿಗಳ ಸಾಂಸ್ಕೃತಿಕ ಕಲಾಸಂಘ, ಕನ್ನಡ ಸಂಸ್ಕೖತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಜನಪದ ಸಿರಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಐತಿಹಾಸಿಕ ಪರಂಪರೆಯಲ್ಲಿ ತಾಯಿ ಬೇರಾಗಿ ಮೌಲ್ಯಾಧಾರಿತ ಜೀವನಕ್ಕೆ ನೆಲೆಯಾದವರು ಜನಪದರು, ಮಣ್ಣು, ಹೊನ್ನು, ಹೆಣ್ಣು ಭೋಗದ ಸಂಕೇತವಲ್ಲ, ಮಣ್ಣು ಬದುಕಿಗೆ ನೆಲೆ, ಹೊನ್ನು ಸಹಬಾಳ್ವೆ ಜೀವನಕ್ಕೆ ಫಲ, ಹೆಣ್ಣು ನಿಸ್ವಾರ್ಥ ಭಾವಕ್ಕೆ ಸ್ಪೂರ್ತಿ ಎಂಬ ಸಾರವನ್ನು ಬದುಕಿನುದ್ದಕ್ಕೂ ಕಾಯಕದೊಂದಿಗೆ ಹೃದಯ ಮುಟ್ಟುವ ಭಾಷೆಯಲ್ಲಿ ಪದಕಟ್ಟಿ ಹಾಡಿ ಮೆರೆದವರು ಜನಪದರು ಎಂದು ವ್ಯಾಖ್ಯಾನಿಸಿದರು.ಪ್ರಸ್ತುತ ದಿನಗಳಲ್ಲಿ ಮಣ್ಣಿನ ಮಹತ್ವ ತಿಳಿಯದೆ ಸ್ವಾರ್ಥ ಜೀವನಕ್ಕೆ ಆದ್ಯತೆ ನೀಡುತ್ತಿರುವುದು ಆಘಾತಕಾರಿ. ಈ ನೆಲ ಪ್ರಾಕೃತಿಕವಾಗಿ, ಸಾಹಿತ್ಯಾತ್ಮಕವಾಗಿ, ಸಾಂಸ್ಕೃತಿಕ ವಾಗಿ ಐತಿಹಾಸಿಕವಾಗಿ ತನ್ನದೆಯಾದ ಮಹತ್ವ ಹೊಂದಿರುವ ನಾಡು. ಕನ್ನಡವೆಂದರೆ ಬಾಯಾರಿದವರಿಗೆ ಪಾನಕ ನೀಡಿದ ನಾಡು ಹತ್ತು ಹಲವು ರಾಜಮನೆತನಗಳ ವೈಭವದ ಬೀಡಾಗಿದೆ, ಇಲ್ಲಿ ವಚನ ಸೌರಭದ ಸಮತೆಯಿದೆ, ದಾಸರ ಹಾಡಿನ ಭಕ್ತಿ ಸುಧೆಯಿದೆ ನವ್ಯನವೋದಯದ ನವೋಲ್ಲಾಸವಿದೆ, ದಲಿತ ಬಂಡಾಯದ ಧ್ವನಿಯಿದೆ, ಇಲ್ಲಿನ ಜನತೆಯು ಜೀವನದಲ್ಲಿ ಕಂಡು, ಉಂಡ ನೋವು. ನಲಿವುಗಳಿಗೆ ಪದಕಟ್ಟಿ ಅರಿವಿನ ನುಡಿಯನ್ನು ಹೃದಯಕ್ಕೆ ಮುಟ್ಟುವಂತ ಮಾಡಿ ಮೌಲ್ಯವಯುತ ಸಮಾಜವನ್ನು ಕಟ್ಟುತ್ತ ತಾಯಿ ನೆಲ ಸ್ಮರಿಸುವಂತೆ ಮಾಡುವ ಮೂಲಕ ನಮ್ಮ ಮುಂದೆ ಸಾಕ್ಷಿಯಾಗಿ ನಿಲ್ಲುತ್ತಾರೆ, ಜಗಕ್ಕೆ ಜ್ಯೋತಿಯಾಗುವ ಪರಂಪರೆಯನ್ನು, ತಾಯಿ ತನ್ನ ದೈನಂದಿನ ಕಾಯಕದ ಜೊತೆ ಮಕ್ಕಳಿಗೆ ಕಲಿಸುತ್ತಿದ ಪರಿಪಾಠವನ್ನು ಎತ್ತಿ ಹಿಡಿದು ಪದಕಟ್ಟಿದವರು ಜನಪದರು ಅವರ ಸಾಧನೆ ಮರೆಯಲಾಗದ್ದು ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ವೈಭವಿಕರಣ ಜೀವನದಿಂದ ಸಂಘರ್ಷ ಹೆಚ್ಚಾಗಿ, ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ ಎಂದು ವಿಷಾದಿಸಿದರು. ಇಂದಿನ ದಿನಗಳಲ್ಲಿ ಮೊಬೈಲೆ ಪ್ರಪಂಚ ಎನ್ನುವಂತಾಗಿದೆ. ಹಾಗಾಗಿ ಮೊಬೈಲ್ ಇರಲಿ ಆದರೆ ಮೌಲ್ಯಯುತ ಬದುಕು ಮೌಲ್ಯಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದಾಗಬೇಕು, ಈ ನೆಲದ ಕೃಷಿ ಮಹತ್ವವನ್ನು ಮರೆಯಬಾರದು, ಜನಪದರು ಕಟ್ಟಿ ಬೆಳೆಸಿದ ಮೌಖಿಕ ಪರಂಪರೆಯನ್ನು ಎತ್ತಿ ಹಿಡಿಯುವಂತಾಗಬೇಕು ಎಂದರು.ಈಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಎನ್ ಉದಯಕುಮಾರ್, ಮೈಸೂರಿನ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಧನಗೆರೆ ಪಿಡಿಒ ಕಮಲ್ ರಾಜ್, ಉಪಾಧ್ಯಕ್ಷೆ ಎಸ್ ಭಾಗ್ಯ, ಹಂಪಾಪುರ ಮಹೇಶ್, ರಾಜೇಶ್, ಶಿವಕುಮಾರ ಸಾಂಸ್ಕೃತಿ ಕಲಾಬಳಗದ ಅದ್ಯಕ್ಷ ಶಾಂತಮೂರ್ತಿ, ಕಲಾವಿದರಾದ ಗುರುಪ್ರಸಾದ್, ಸೋಮಣ್ಣ, ಕೆಸ್ತೂರು ಪ್ರಕಾಶ್, ಆಲಹಳ್ಳಿ ಮಹೇಶ್, ಕೊಮಾರನಪುರ ಮಹದೇವಸ್ವಾಮಿ, ಮಡಿಗುಂಡ ಪ್ರಸಾದ್, ಜಾಗತಿಕ ಲಿಂಗಾಯತ ಮಹಾಸಭೆಯ ಅದ್ಯಕ್ಷ ಬಿಂಧು ಲೋಕೇಶ್ ,ಕೆಸ್ತೂರು ಎಂ ಪರಮಶಿವಪ್ಪ , ವೀರಭದ್ರಸ್ವಾಮಿ ದೇಗುಲ ಅರ್ಚಕರಾದ ಶಿವಕುಮಾರಸ್ವಾಮಿ, ಸತ್ತೇಗಾಲ ಚಂದ್ರು ಇನ್ನಿತರಿದ್ದರು. ಗಮನ ಸೆಳೆದ ಸಾಂಸ್ಕೃತಿಕ ಕಲಾತಂಡಗಳು:ಇದೇ ವೇಳೆ ಜನಪದ ಸಿರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕ ಜನಪದ ಕಲಾತಂಡಗಳು ನೆರೆದಿದ್ದ ಪ್ರೇಕ್ಷಕರು ಹಾಗೂ ಗಣ್ಯರ ಗಮನ ಸೆಳೆಯಿತು. ಮೊದಲಿಗೆ ನಡೆದಾಡುವ ದೇವರು, ಕಾಯಕಯೋಗಿ ಶತಮಾನದ ಸಂತ ಶ್ರೀ ಶಿವಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಹೊಸ ಮಾಲಂಗಿ ಬಸವರಾಜು ಮತ್ತು ತಂಡ ವೀರಗಾಸೆ ಪ್ರದರ್ಶಿಸಿ ಗಮನ ಸೆಳೆದರು, ಮೈಸೂರಿನ ಭರತನಾಟ್ಯ ಕತಲಾವಿದರಾದ ಮೋನಿಷಾ ಭರತನ್ಯಾಟದ ಮೂಲಕ ಪ್ರೇಕ್ಷಕರ ರಂಜಿಸಿದರೆ, ಹಳೆ ಹಂಪಾಪುರದ ರಾಜೇಶ್, ಗುರುಪ್ರಸಾದ್ ಇನ್ನಿತರರು ಸುಗಮ ಸಂಗೀತ ನಡೆಸಿದರು. ಪ್ರಕಾಶ್ ಕೆಸ್ತೂರು ಮತ್ತು ಸೋಮಣ್ಣ ತೊರಳ್ಳಿ ತಂಡದವರಿಂದ ಜನಪದ ಮತ್ತು ರಂಗಗೀತಗಾಯನ, ಶೋಭ ಮತ್ತು ಸವಿತ ಅವರಿಂದ ತತ್ವಪದ, ವಚನಗಾಯನ, ಆಲಹಳ್ಳಿ ಮಹೇಶ್ ಮತ್ತು ಮಹದೇವಸ್ವಾಮಿ ಅವರು ನಡೆಸಿಕೊಟ್ಟ ಮಹದೇಶ್ವರರ ಮಂಟೇಸ್ವಾಮಿ ಗೀತೆಗಳು ಗಮನ ಸೆಳೆದವು. ಕಲಾವಿದರ ಗಾಯನಕ್ಕೆ ಕೆಸ್ತೂರು ಶಾಂತಪ್ಪ, ರಾಜೇಶ್ ಹಳೆ ಹಂಪಾಪುರ, ಕೊಳ್ಳೇಗಾಲ ಕಿಶೋರ್, ಹರೀಶ್, ಸೋಮಣ್ಣ, ನಿತೀಶ, ಹಳೆ ಹಂಪಾಪುರ ಮಹೇಶ್, ಕೆಸ್ತೂರು ಸುರೇಶ್ ಇನ್ನಿತರ ಕಲಾವಿದರು ವಾದ್ಯ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದರು.
ಕಳ್ಳಿಪುರ ಮಹದೇವಸ್ವಾಮಿಗೆ ವಚನ ಕೌಸ್ತುಭ ಪ್ರಶಸ್ತಿ:ಜನಪದ ಸಿರಿ ಸಮಾರಂಭದಲ್ಲಿ ಕಳ್ಳಿಪುರದ ಮಹದೇವಸ್ವಾಮಿ ಅವರ ಕಲಾಸೇವೆಗೆ ವಚನ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತತ್ಪಪದ ಹಾಗೂ ಜನಪದ ಕ್ಷೇತ್ರಗಳಲ್ಲಿ ಅವರ ಸಾಧನೆ ಅಮೂಲ್ಯವಾದುದು ಎಂದು ಆಯೋಜಕರು ಹೇಳಿದರು. ಅಲ್ಲದೆ ರಾಜೇಗೌಡರು, ರಾಜೇಶ ರಾಜಣ್ಣ, ಬಸವಣ್ಣ, ವಾಸು ಗೌಡ ಸೇರಿದಂತೆ ಹಲವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.