ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಮತ್ತು ಸೇವೆಗಳು ಎಂದೆಂದಿಗೂ ಅವಿಸ್ಮರಣೀಯ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.ತಾಲೂಕಿನ ಕೋರೇಗಾಲ ಗ್ರಾಮದಲ್ಲಿ ಶ್ರೀಬಾಲಾಜಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ನಡೆದ ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಎಲ್ಲಾ ಸಮುದಾಯದ ಜನರ ಅರ್ಥಿಕ ಮಟ್ಟವನ್ನು ಸುಧಾರಿಸಲು ಪೇಟೆ ನಿರ್ಮಿಸಿ ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ಕೆರೆ ಕಟ್ಟೆಗಳನ್ನು ನಿರ್ಮಿಸುವ ಜೊತೆಗೆ ನವ ಬೆಂಗಳೂರು ನಿರ್ಮಾಣಕ್ಕೆ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.ಮೈಸೂರು ರಾಜ ನಾಲ್ವಡಿ ಸಾರ್ವಜನಿಕರಿಗೆ ಉದ್ಯೋಗ ಕಲ್ಪಿಸಲು ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿದರು. ತಳ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು, ಶಾಲಾ- ಕಾಲೇಜು ಆರಂಭಿಸಿದರು. ಮೈಸೂರು ಭಾಗದ ಜನರು ನೆಮ್ಮದಿಯ ಬದುಕು ಸಾಧಿಸಲು ನಾಲ್ವಡಿಯವರು ಕಟ್ಟಿಸಿದ ಕೆ.ಆರ್.ಎಸ್ ಅಣೆಕಟ್ಟೆಯ ಮೂಲ ಕಾರಣವಾಗಿದೆ. ಪ್ರತಿಯೊಂದು ಮನೆ ಸದಸ್ಯರು ನಾಲ್ವಡಿಯವರನ್ನು ಸ್ಮಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ ಮಾತನಾಡಿ, ಮಹನೀಯರ ಸ್ಮರಣೆ ನಿರಂತರವಾಗಿ ನಡೆಯಬೇಕು. ಸಾಧಕರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಜಿ.ರಮೇಶ್, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ನಿವೃತ್ತ ಶಿಕ್ಷಕರಾದ ಎನ್.ನಾಗರಾಜು, ಕಾಂತರಾಜು ಸೇರಿದಂತೆ ಇತರರು ಇದ್ದರು.