ವೀರಶೈವ ಲಿಂಗಾಯತರಲ್ಲಿ ದ್ವಂದ್ವ ನೀತಿ ಸೃಷ್ಟಿಸುತ್ತಿರುವ ಕಾರ್ಯ ಸಲ್ಲದು

| Published : Sep 11 2025, 12:04 AM IST

ವೀರಶೈವ ಲಿಂಗಾಯತರಲ್ಲಿ ದ್ವಂದ್ವ ನೀತಿ ಸೃಷ್ಟಿಸುತ್ತಿರುವ ಕಾರ್ಯ ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ತತ್ವ ಪ್ರಚಾರ ನೆಪ ಮಾಡಿಕೊಂಡು ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ದ್ವಂದ್ವ ನೀತಿ ಸೃಷ್ಟಿಸುತ್ತಿರುವ ಕಾರ್ಯ ಸಲ್ಲದು

ಕನ್ನಡಪ್ರಭ ವಾರ್ತೆ ಕೊಲ್ಹಾರ

ಬಸವನ ಬಾಗೇವಾಡಿಯಿಂದ ಆರಂಭಗೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಯಾತ್ರೆಯು ನಾಡಿನಾದ್ಯಂತ ಸಂಚರಿಸುತ್ತಿದ್ದು ಹೆಮ್ಮೆಯ ಸಂಗತಿ. ಆದರೆ ಬಸವ ತತ್ವ ಪ್ರಚಾರ ನೆಪ ಮಾಡಿಕೊಂಡು ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ದ್ವಂದ್ವ ನೀತಿ ಸೃಷ್ಟಿಸುತ್ತಿರುವ ಕಾರ್ಯ ಸಲ್ಲದು ಎಂದು ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ವೀರಶೈವ ಹಾಗೂ ಲಿಂಗಾಯತರನ್ನು ಬೇರೆ ಮಾಡಲು ಹೊರಟಿರುವ ಬುದ್ಧಿ ಜೀವಿಗಳು, ಪ್ರಜ್ಞಾವಂತರು, ಸನಾತನ ಹಿಂದೂ ಸಂಸ್ಕೃತಿಯಲ್ಲಿ ಭಾರತಾಂಬೆ ಮಡಿಲಲ್ಲಿ ಬದುಕಿ-ಬಾಳುತ್ತಿರುವ ನಾವೆಲ್ಲರೂ ಒಂದು, ವಿಶ್ವವೇ ನಮ್ಮ ಬಂಧು ಎಂಬ ತತ್ವ ಸಿದ್ಧಾಂತವನ್ನು ಮೈಗೊಡಿಸಿಕೊಳ್ಳಬೇಕು. ಬಸವಣ್ಣನವರ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ-ಇವ ನಮ್ಮವ ಎಂದೆನಿಸಯ್ಯ ಅನ್ನುವ ವಚನವಾದರೂ ಪಾಲಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಕಾವಿಧಾರಿಗಳೇ ಕಾವಿಧಾರಿಗಳನ್ನು ಟೀಕೆ ಮಾಡುತ್ತಿರುವುದು ಖೇದಕರವಾದದ್ದು. ಬಸವಣ್ಣ ಸರ್ವರನ್ನು ಒಂದು ಗೂಡಿಸಿ ಅನುಭವ ಮಂಟಪ ನಿರ್ಮಿಸಿ ಸಮಾನತೆಯ ಸಾರಿ ವೀರಶೈವ ಧರ್ಮದ ಘನತೆ ಎತ್ತಿ ಹಿಡಿದ ಮಹಾತ್ಮರು. ಇನ್ನಾದರೂ ನಾವೆಲ್ಲರೂ ವೀರಶೈವ ಲಿಂಗಾಯತ ಸಮುದಾಯದವರು ಎಲ್ಲರೂ ಒಂದೇ ಎಂಬ ನಿಲುವಿಗೆ ಬದ್ಧರಾಗೋಣ. ಕನ್ನಡ ನಾಡಿನಲ್ಲಿ ಬಹು ಸಂಖ್ಯಾತರಾದ ವೀರಶೈವ ಲಿಂಗಾಯತರು ಒಂದೂವರೆ ಕೋಟಿಗಿಂತ ಹೆಚ್ಚಿರುವ ಸಮುದಾಯದವರನ್ನು ಅರವತ್ತೈದು ಲಕ್ಷಕ್ಕೆ ತೋರಿಸುತ್ತಿರುವುದು ಹಾಸ್ಯಾಸ್ಪದ. ಬಂಧುಗಳೇ ಇನ್ನಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ಒಂದೇ ಎಂಬ ತತ್ವ ಸಿದ್ಧಾಂತ ಸಾರೋಣ. ಶಿವಭಕ್ತರು- ಬಸವಾಭಿಮಾನಿಗಳು ಒಂದಾಗೋಣ ಎಂದು ಶ್ರೀಗಳು ತಿಳಿಸಿದರು.