ಉತ್ತಮ ಸಾಧಕರ ಗೌರವಿಸುವ ಕಾರ್ಯ ಶ್ಲಾಘನೀಯ: ಪ್ರಮೋದ ಹೆಗಡೆ

| Published : Sep 20 2024, 01:39 AM IST

ಸಾರಾಂಶ

ಸಮಾಜಮುಖಿ ಸವಾಲುಗಳನ್ನು ಪ್ರತಿದಿನ ಎದುರಿಸಲೇಬೇಕಾದ ಇಂದಿನ ಪರಿಸ್ಥಿತಿಯಲ್ಲಿಯೂ ಉತ್ತಮ ಸಾಧಕರಿಗೆ ಅರ್ಹ ಗೌರವವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಪ್ರಮೋದ ಹೆಗಡೆ ತಿಳಿಸಿದರು.

ಯಲ್ಲಾಪುರ: ಬದುಕಿನಲ್ಲಿ ಪ್ರತಿಯೊಬ್ಬರ ಮಹತ್ವಾಕಾಂಕ್ಷೆಯೂ ಉನ್ನತಿಯ ಸಾಧನೆಯೇ ಆಗಿದ್ದರೂ ಇದಕ್ಕೆ ಪೂರಕವಾಗಿ ಸಮರ್ಥವಾಗಿ ಮಾತನಾಡುವ ವೈಚಾರಿಕ ಶಕ್ತಿಯನ್ನು ಮಾತ್ರ ಬೆಳೆಸಿಕೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ, ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.

ಸೆ. ೧೭ರಂದು ತಾಲೂಕಿನ ಉನ್ನತಿ ಸೇವಾ ಟ್ರಸ್ಟ್ ಉನ್ನತಿಯ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅನಂತ ವ್ರತದ ಪ್ರಯುಕ್ತ ಆಯೋಜಿಸಿದ್ದ ತಾಳಮದ್ದಲೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಸಮಾಜಮುಖಿ ಸವಾಲುಗಳನ್ನು ಪ್ರತಿದಿನ ಎದುರಿಸಲೇಬೇಕಾದ ಇಂದಿನ ಪರಿಸ್ಥಿತಿಯಲ್ಲಿಯೂ ಉತ್ತಮ ಸಾಧಕರಿಗೆ ಅರ್ಹ ಗೌರವವನ್ನು ನೀಡುತ್ತಿರುವುದು ಶ್ಲಾಘನೀಯ. ವೈಚಾರಿಕ ಜಿಜ್ಞಾಸೆಗಳು ಗರಿಗೆದರಲು ಇಂತಹ ಮಾದರಿ ಕಾರ್ಯಕ್ರಮಗಳು ನೆರವಾಗುತ್ತವೆ ಎಂದರು.ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ಪುರಸ್ಕೃತ ಉದ್ಯಮಿ ಶ್ರೀಪತಿ ಭಟ್ಟ ಮಾತನಾಡಿ, ನನಗೆ ಇಂದಿನ ಅಭಿನಂದನೆ ಹಿಂದೆ ದೊರೆತಿರುವ ಎಲ್ಲ ಪ್ರಶಸ್ತಿಗಳಿಗಿಂತ ಹಿರಿದಾಗಿದ್ದು, ನನ್ನ ಸಾಧನೆಗೆ ಪ್ರೇರಣೆ ನೀಡಿದ ಹಿರಿಯರ ಸಮ್ಮುಖದಲ್ಲಿ ಹುಟ್ಟೂರಿನ ಸನ್ಮಾನ ಅತ್ಯಂತ ಮಹತ್ವದ್ದಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಮತ್ತೋರ್ವ ಸಾಧಕ ಸಾಹಿತಿ, ನಿವೃತ್ತ ಬ್ಯಾಂಕ್ ಉದ್ಯೋಗಿ, ಬೆಂಗಳೂರು ಸಂಸ್ಕೃತ ವಿವಿ ಸಿಂಡಿಕೇಟ್ ಸದಸ್ಯ ನಾರಾಯಣ ಯಾಜಿ ಸಾಲೇಬೈಲು ಮಾತನಾಡಿ, ಮನುಷ್ಯನಿಗೆ ಇರಬಹುದಾದ ಎಲ್ಲ ಚಿಂತನೆಗಳೂ ಸಾಕಾರವಾಗಲು ಸೂಕ್ತ ಹಿನ್ನೆಲೆ ಅತ್ಯವಶ್ಯಕ. ಸಂಸ್ಕೃತ್ಯವಂತರಾಗಿ ಬೆಳೆದವರಿಗೆ ಎಲ್ಲ ಭಾಗ್ಯ ದೊರೆತರೆ ಮಾತ್ರ ಅದುವೆ ಅವಕಾಶ ಎನ್ನಬಹುದು ಎಂದರು.

ಉನ್ನತಿ ಸೇವಾ ಟ್ರಸ್ಟ್ ಅಧ್ಯಕ್ಷ ಗಜಾನನ ಭಟ್ಟ, ನಿವೃತ್ತ ನಾಸಾ ಅಧಿಕಾರಿ ಗೋಪಾಲ ಐಯ್ಯಂಗಾರ, ವಿ. ಶರಾವತಿ ಭಟ್ಟ ವೇದಿಕೆಯಲ್ಲಿದ್ದರು. ಜಿ.ಕೆ. ಹೆಗಡೆ ಕನೇನಹಳ್ಳಿ ಮತ್ತು ಸಿಂಚನಾ ಮೂರ್ತಿ ಸನ್ಮಾನಪತ್ರ ವಾಚಿಸಿದರು. ಪಾಠಶಾಲೆಯ ಅಧ್ಯಾಪಕ ವಿ. ಮಹೇಶ ಭಟ್ಟ ನಿರ್ವಹಿಸಿದರು. ಸದಾಶಿವ ಭಟ್ಟ ಸ್ವಾಗತಿಸಿದರು. ಉನ್ನತಿ ಟ್ರಸ್ಟಿ ಎನ್.ಜಿ. ಹೆಗಡೆ ವಂದಿಸಿದರು. ಪ್ರಮುಖರಾದ ಎಂ.ಜಿ. ಭಟ್ಟ ಸಂಕದಗುಂಡಿ, ಆರ್.ಎನ್. ಭಟ್ಟ ಧುಂಡಿ, ಜಿ.ಎನ್. ಹೆಗಡೆ ಹಿರೇಸರ, ಡಿ. ಶಂಕರ ಭಟ್ಟ ಇತರರು ಇದ್ದರು.