ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಪ್ರತಿಯೊಬ್ಬರಲ್ಲೂ ಇರುವ ಸುಪ್ತವಾದ ಪ್ರತಿಭೆಯನ್ನು ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿ ಹೊರ ತೆಗೆಯುತ್ತಿದೆ ಎಂದು ಜೇಸಿ ಸಂಸ್ಥೆ ಉಪಾಧ್ಯಕ್ಷ ಅಪೂರ್ವ ರಾಘು ಪ್ರಶಂಸೆ ವ್ಯಕ್ತಪಡಿಸಿದರು. ಅವರು ಭಾನುವಾರ ಅಗ್ರಹಾರದ ಉಮಾ ಮಹೇಶ್ವರ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಸಾಪ ಮಹಿಳಾ ಘಟಕ, ಕಸಾಪ ಹೋಬಳಿ ಘಟಕ, ನಗರ ಘಕದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ರಾಜಕುಮಾರ್ ಸಿನಿಮಾದ ಹಾಡುಗಳ ಅಂತ್ಯಾಕ್ಷರಿ ಸ್ಪರ್ಧೆ ಹಾಗೂ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಮನರಂಜನೆಗಾಗಿ ಕಸಾಪದಿಂದ ರಾಜ್ ಕುಮಾರ್ ಸಿನಿಮಾದ ಹಾಡುಗಳ ಅಂತ್ಯಾಕ್ಷರಿ ಏರ್ಪಡಿಸಿದ್ದೇವೆ. ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದಾರೆ. ಈ ಹಿಂದೆ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಿಗಾಗಿ ಒಗಟು ಬಿಡಿಸುವ ಕಾರ್ಯಕ್ರಮ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆಯಾದರೂ ಒತ್ತಡದಿಂದ ಹೊರ ಬರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತೇವೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಆಶಯ ಭಾಷಣ ಮಾಡಿ, ಡಾ,ರಾಜಕುಮಾರ್ 200 ಚಿತ್ರಗಳಲ್ಲಿ ನಟಿಸಿದ್ದು ಏ. 24ರಂದು ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದು ಕಸಾಪದಿಂದ ಅಂತ್ಯಾಕ್ಷರಿ, ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಜೀವನ ಚೈತ್ರದಲ್ಲಿ ಬರುವ ಹಾಡು ನಾದಮಯ ಹಾಡು ಜನರ ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗೇ ಉಳಿದಿದೆ. ಅವರ ಹಾಡುಗಳು ವೈವಿದ್ಯಮಯವಾಗಿತ್ತು ಎಂದರು.
ಅತಿಥಿಯಾಗಿದ್ದ ಕಸಾಪ ನಿಕಟ ಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಡಾ.ರಾಜಕುಮಾರ್‌ರು ಬೇಡರಕಣ್ಣಪ್ಪನಿಂದ ಶಬ್ಧವೇದಿಯವರೆಗೆ 201 ಚಿತ್ರದಲ್ಲಿ ನಟಿಸಿದ್ದರು. ನರಸಿಂಹರಾಜಪುರ ಪಟ್ಟಣದಲ್ಲಿ 2 ಸಿನಿಮಾ ಥಿಯೇಟರ್ ಇದ್ದು ಚಿಕ್ಕಂದಿನಲ್ಲಿ ನಾವು ರಾಜಕುಮಾರ್ ಸಿನಿಮ ನೋಡುತ್ತಾ ಬೆಳೆದಿದ್ದೇವೆ ಎಂದರು.ಅತಿಥಿಗಳಾಗಿ ಕಸಾಪ ಜಿಲ್ಲಾ ಸಂಚಾಲಕ ಎಚ್.ವಿನಯ, ಪೊಲೀಸ್ ಕಾನ್ಪಟೇಬಲ್ ಎಚ್.ಕೆ.ಯುವರಾಜ್, ನಿವೃತ್ತ ಜೀವ ವಿಮಾ ಅಧಿಕಾರಿ ಕುಮಾರಸ್ವಾಮಿ, ತಾ. ಕಸಾಪ ಕಾರ್ಯದರ್ಶಿ ಮಂಜಪ್ಪ ಇದ್ದರು. ಇದೇ ವೇಳೆ ಯುವ ಕವಿ ಪೊಲೀಸ್ ಕಾನ್ಸ್‌ಟೇಬಲ್ ಎಚ್.ಕೆ.ಯುವರಾಜ್ ಹಾಗೂ ಶಿವಮೊಗ್ಗದ ನಿವೃತ್ತ ಜೀವ ವಿಮಾ ನಿಗಮದ ಅಧಿಕಾರಿ ಕುಮಾರಸ್ವಾಮಿರನ್ನು ಸನ್ಮಾನಿಸಲಾಯಿತು. ಮಂಜುಳಾ ಪ್ರಾರ್ಥಿಸಿ, ಆರ್.ನಾಗರಾಜ್ ಸ್ವಾಗತಿಸಿ, ಜಯಂತಿ ನಿರೂಪಿಸಿ, ಎಚ್.ಡಿ.ವಿನಯ ವಂದಿಸಿದರು.
ನಂತರ 20 ತಂಡಗಳಿಗೆ ಅಂತ್ಯಾಕ್ಷರಿ ಹಾಗೂ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಗೆದ್ದ ತಂಡಗಳಿಗೆ ಬಹುಮಾನ ನೀಡಲಾಯಿತು.