ಬಿಸಿಲಿಗೆ ಒಣಗುತ್ತಿವೆ ಅಡಕೆ ತೋಟಗಳು

ಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಿನಲ್ಲಿ ಅತಿಯಾದ ತಾಪಮಾನದಿಂದ ಜನಜೀವನಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ಬೆಳಗ್ಗೆ 11ಗಂಟೆಯ ನಂತರ ಮನೆಯ ಹೊರಗೆ ಕೆಲಸ ಮಾಡುವುದೇ ಕಷ್ಟಕರವಾಗಿದೆ. ಹಿಂದೆಲ್ಲ ಬೇಸಿಗೆಯಲ್ಲಿ ಇಡೀ ದಿನ ಕೆಲಸ ಮಾಡಿದರೂ ಈ ಪರಿಯ ಸೆಕೆ ಇರಲಿಲ್ಲ. 20ರಿಂದ 25 ಡಿಗ್ರಿ ತಾಪಮಾನ ಇರುತ್ತಿತ್ತು. ಈಗ ರಾತ್ರಿ ವೇಳೆಯಲ್ಲೂ 25 ಡಿಗ್ರಿ ತಾಪಮಾನ ಇರುತ್ತದೆ. ಹಗಲಿನಲ್ಲಿ 35ರಿಂದ 38 ಡಿಗ್ರಿಯ ತಾಪಮಾನ ಇರುತ್ತಿದ್ದು, ಇದು ಜನಸಾಮಾನ್ಯರ ದೈನಂದಿನ ಕೆಲಸಕ್ಕೆ ಮತ್ತು ಸಾರ್ವಜನಿಕ ಕೆಲಸ ಕಾರ್ಯ, ಮದುವೆ ಮುಂಜಿ ಮಾಡುವವರಿಗೆ ತುಂಬಾ ತೊಂದರೆದಾಯಕವಾಗಿದೆ. ಬೇಸಿಗೆ ಕಾಲದಲ್ಲಿ ಇದು ಸಾಮಾನ್ಯವಾದರೂ ಕಳೆದ ಒಂದು ವಾರದಿಂದ ಮೋಡದ ಜೊತೆಗೆ ಇರುವ ಬಿಸಿಲಿನ ತಾಪಕ್ಕೆ ಗಿಡ ಮರಗಳೆಲ್ಲವೂ ಬಾಡಿ ಬಸವಳಿದಿವೆ.

ಕೃಷಿಕರ ಬದುಕಿನ ಬುತ್ತಿಯಾದ ತೋಟಪಟ್ಟಿಗಳು, ಬಿಸಿಲಿನ ತಾಪಕ್ಕೆ ನಲುಗಿ ಹೋಗುತ್ತಿವೆ. ಅಡಕೆ, ತೆಂಗು, ಇತರ ಎಲ್ಲ ಗಿಡಗಳಲ್ಲಿ ಇರುವ ಎಳೆಯ ಕಾಯಿಗಳು, ಒಣಗಿ ಬೀಳುತ್ತಿವೆ. ಸಿಂಗಾರಗಳು ಬಿಸಿಲಿನ ಬಿರುಸಿಗೆ ಒಣಗುತ್ತಿವೆ. ನೀರು ಇರುವವರು ನೀರು ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ ಎಂಬ ಸ್ಥಿತಿಗೆ ಬಂದಿದ್ದಾರೆ. ಮೇಲಿನ ಬಿಸಿಲಿನ ತಾಪಕ್ಕೆ, ಗಿಡಗಳ ಬುಡಕ್ಕೆ ನೀರು ಬಿದ್ದರೆ ಇರುವ ಮಿಡಿಗಳೂ ಬಿದ್ದು ಹೋಗುತ್ತವೆ ಎನ್ನುವ ರೈತರು, ಮಳೆಗಾಗಿ ಆಕಾಶ ನೋಡುತ್ತಾ ದಿಕ್ಕೇ ತೋಚದೆ ಕಂಗೆಟ್ಟಿದ್ದಾರೆ. ದನಕರುಗಳಿಗೆ, ಅಲ್ಲಲ್ಲಿ ಸಿಗುವ ನೀರುಗಳೆಲ್ಲ ಬತ್ತಿಹೋಗಿದೆ. ಕಾಡು ಪ್ರಾಣಿಗಳ ಸ್ಥಿತಿಯಂತೂ ಯಾರಿಗೂ ಬೇಡ, ಕಾಡಲ್ಲಿ ನೀರಿಲ್ಲದ ಕಾರಣ ರೈತರ ತೋಟ ಗಳಿಗೆ ನೀರಿಗಾಗಿ ಬರುತ್ತಿವೆ, ಇದರಿಂದ ರೈತರ ಬೆಳೆ ಹಾಳಾಗುತ್ತಿದೆ. ಅರಣ್ಯ ಇಲಾಖೆ ಅರಣ್ಯದಲ್ಲಿ ಹತ್ತಾರು ಕಡೆ ನೀರಿನ ಸಂಗ್ರಹಣೆ ಮಾಡಿ ಕೊಟ್ಟರೆ ಪ್ರಾಣಿಗಳ ಬದುಕು ಹಸನಾಗಬಹುದು. ನೀರು ಇರುವ ಕಡೆ ಪ್ರವಾಸಿಗರು, ಬಂದು ಹೋಗುತ್ತಿರುವ ಕಾರಣ ಕಾಡು ಪ್ರಾಣಿಗಳು ನೀರಿನ ಬರ ಎದುರಿಸಬೇಕಾಗಿದೆ, ಅಲ್ಲಲ್ಲಿ ಮಳೆ ಬೀಳುತ್ತಿದ್ದರೂ ತಾಲೂಕಿನಲ್ಲಿ ಮಳೆ ಇಲ್ಲದೇ ಜನಜೀವನಕ್ಕೆ ತೊಂದರೆ ಆಗಿದೆ. ಇಡೀ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.