ಸಾರಾಂಶ
- ಜಿಲ್ಲೆ ಕಾರ್ಮಿಕ ಅಧಿಕಾರಿಗಳಿಗೆ ಸಂಘ ಅಭಿನಂದನೆ: ಗೌರವಾಧ್ಯಕ್ಷ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಸುಮಾರು 23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡಿದೆ. ಈ ಯೋಜನೆಗೆ ಫೋಟೋಗ್ರಾಫರ್ಸ್‌ಗಳನ್ನು ಸೇರ್ಪಡೆ ಮಾಡಿರುವುದು ಸಂತಸದ ವಿಷಯ ಎಂದು ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಛಾಯಾಗ್ರಾಹಕರಿಗೆ ಅತಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿಗಳು ಹೇಳಿದ್ದಾರೆ. ಈ ವಲಯವನ್ನು ಗುರುತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ದಾವಣಗೆರೆ ಜಿಲ್ಲೆ ಕಾರ್ಮಿಕ ಅಧಿಕಾರಿಗಳಿಗೆ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಅಕಾಡೆಮಿ ಸ್ಥಾಪಿಸಬೇಕು:ಸಂಘದ ಅಧ್ಯಕ್ಷ ಎಂ.ಮನು ಮಾತನಾಡಿ, ಫೋಟೋಗ್ರಾಫರ್‌ಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಫೋಟೋಗ್ರಾಫರ್ಸ್ ಸೇವಾ ಕಾರ್ಯ ಗುರುತಿಸಿ ಶೀಘ್ರವೇ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಬೇಕು. ಅವರ ಕುಟುಂಬಕ್ಕೆ ನೆರವಾಗುವಂತೆ ಸವಲತ್ತುಗಳನ್ನು ನೀಡಬೇಕು. ಅವರ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಆಶ್ರಯ ಮನೆ ಅಥವಾ ನಿವೇಶನ ಛಾಯಾಗ್ರಾಹಕರ ಕಾಲೋನಿ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಅಸಂಘಟಿತ ವಲಯಕ್ಕೆ ಫೋಟೋಗ್ರಾಫರ್ಸ್ ಸೇರ್ಪಡೆ ವಿಷಯ ಕುರಿತು ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿಯಿರುವ ಮನು ಸ್ಟುಡಿಯೋ, 2ನೇ ಕ್ರಾಸ್, 2ನೇ ಮೇನ್, ವಿನೋಬನಗರ, ದಾವಣಗೆರೆ, ಅಧ್ಯಕ್ಷ ಎಂ.ಮನು- (9448339151), ಗೌರವಾಧ್ಯಕ್ಷ ಬಿ. ಮಂಜುನಾಥ (9844145007), ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ (9845328250) ಅವರನ್ನು ಸಂಪರ್ಕಿಸಬಹುದು. ಅಲ್ಲದೇ, ಕಚೇರಿಗೆ ಮೂಲ ದಾಖಲಾತಿಗಳು, ಆಧಾರ್ ಕಾರ್ಡ್ ಇತ್ತೀಚಿನ 2 ಭಾವಚಿತ್ರ, ಫೋಟೋಗ್ರಾಫರ್ ಸಂಘದ ಗುರುತಿನ ಚೀಟಿ (ಐಡಿ ಕಾರ್ಡ್) ತಂದು ಮೂರು ದಿನಗಳೊಳಗೆ ನೋಂದಾಯಿಸಲು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ಎಸ್.ರಾಜಶೇಖರ್, ಉಪಾಧ್ಯಕ್ಷ ಡಿ.ರಮೇಶ್, ಖಜಾಂಚಿ ಡಿ.ರಂಗನಾಥ್ ಉಪಸ್ಥಿತರಿದ್ದರು.
- - - -13ಕೆಡಿವಿಜಿ32ಃ:ಅಸಂಘಟಿತ ವಲಯಕ್ಕೆ ಫೋಟೋಗ್ರಾಫರ್ಸ್ ಸೇರ್ಪಡೆ ಕುರಿತು ಬಿ.ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.