ಸಾರಾಂಶ
ಪ್ರತಿಯೊಬ್ಬರ ಬದುಕಿನಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿತುಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳು ಸಂವಿಧಾನ, ಕಾನೂನು ಓದುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು.
ಧಾರವಾಡ:
ಇಲ್ಲಿಯ ನವನಗರದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಟ್ಟಡದ ಶಂಕುಸ್ಥಾಪನೆ, ಕಾನೂನು ಶಾಲೆಯ ಸಭಾಂಗಣ, ಕಲ್ಪಿತ ನ್ಯಾಯಾಲಯ ಸಭಾಂಗಣ ಹಾಗೂ ಪರೀಕ್ಷಾ ಭವನದ 2ನೇ ಮಹಡಿಯ ಉದ್ಘಾಟನೆಯನ್ನು ಗುರುವಾರ ನೆರವೇರಿಸಿದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ 2025ರ ಆಗಸ್ಟ್ ಒಳಗೆ ವಿವಿ ಆಡಳಿತ ಭವನ ಉದ್ಘಾಟಿಸುವ ಭರವಸೆ ನೀಡಿದರು.ಪ್ರತಿಯೊಬ್ಬರ ಬದುಕಿನಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿತುಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳು ಸಂವಿಧಾನ, ಕಾನೂನು ಓದುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ರಾಷ್ಟ್ರೀಯ ಕಾನೂನು ಶಾಲೆಯನ್ನು ಮೀರಿಸುವ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು ಎಂದರು.
ಬೇರೆ ರಾಜ್ಯಕ್ಕೆ ಹೋಲಿಸಿದರೆ ಕಾನೂನು ವಿಷಯದಲ್ಲಿ ಕರ್ನಾಟಕ ಮುಂದಿದೆ ಎಂದ ಅವರು, ದೇಶದಲ್ಲಿ 3 ಕೋಟಿ ವ್ಯಾಜ್ಯಗಳು ಬಾಕಿ ಇದ್ದು, ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ ಎಂಬ ಮಾಹಿತಿ ನೀಡಿದರು.ಕಾನೂನು ವಿಶ್ವವಿದ್ಯಾಲಯದಲ್ಲಿ ಮೊದಲು 180 ವಿದ್ಯಾರ್ಥಿಗಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲು ಅವಕಾಶವಿತ್ತು. ತದನಂತರದಲ್ಲಿ 300 ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲಾತಿ ಮಾಡಿಕೊಳ್ಳಲಾಯಿತು. ಆ ಮೂಲಕ 480 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಯಿತು. ಕಾನೂನು ಅಧ್ಯಯನ ಮಾಡಿದವರಿಗೆ ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ದೊರೆಯಲಿವೆ. ಕಾನೂನು ಅಧ್ಯಯನ ಮಾಡಿದವರು ಭರವಸೆಯ ಆಶಾದಾಯಕ ಬದುಕು ಕಟ್ಟಿಕೊಳ್ಳಬಹುದು ಎಂದರು.ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಅಬ್ಬಯ್ಯ ಪ್ರಸಾದ ಮಾತನಾಡಿ, ₹ 39 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು. ಕಾನೂನು ವಿಶ್ವವಿದ್ಯಾಲಯದಂತೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳೆಸುವ ಕೆಲಸಗಳಾಗಬೇಕಿವೆ ಎಂದರು. ₹ 120 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ತಾಲೂಕು ನ್ಯಾಯಾಲಯವನ್ನು ನಿರ್ಮಿಸಲಾಯಿತು ಎಂದು ತಿಳಿಸಿದರು.ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಶ್ವವಿದ್ಯಾಲಯವು 56 ಎಕರೆ ಪ್ರದೇಶದ ಕ್ಯಾಂಪಸ್ ಹೊಂದಿದೆ. ಬೆಂಗಳೂರಿನ ಐಐಎಂ ಕ್ಯಾಂಪಸ್ ನಷ್ಟೇ ವಿದ್ಯಾರ್ಥಿಗಳ ಪ್ರವೇಶವನ್ನು ವಿಶ್ವವಿದ್ಯಾಲಯ ಹೊಂದಿರುವುದು ಗಮನಾರ್ಹ ಸಂಗತಿ ಎಂದರು. ಕಾನೂನಿನ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ, ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಲು ಮುಂದಾಗಬೇಕಿದೆ ಎಂದು ಹೇಳಿದರು.ಸಹಾಯಕ ಕುಲಸಚಿವ ಸುನೀಲ ಬಾಗಡೆ, ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪಾಲಿಕೆ ವಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲ, ಪಾಲಿಕೆ ಸದಸ್ಯೆಯರಾದ ನೀಲವ್ವ ಅರವಾಳದ, ಕುಲಸಚಿವೆ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಪ್ರೊ. ಡಾ. ರತ್ನಾ ಭರಮಗೌಡರ, ಚಿದಾನಂದ ಪಾಟೀಲ ಇದ್ದರು.