ರಾಜ್ಯ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದ್ದು, ಕಟ್ಟಡ ಅನುಮತಿ, ಇ ಖಾತಾ, ನೋಂದಣಿ ಸೇರಿದಂತೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಯಾವುದೇ ಕೆಲಸಗಳಾಗದೆ ಜನರು ನಿತ್ಯ ಪರದಾಡುವಂತಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದ್ದು, ಕಟ್ಟಡ ಅನುಮತಿ, ಇ ಖಾತಾ, ನೋಂದಣಿ ಸೇರಿದಂತೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಯಾವುದೇ ಕೆಲಸಗಳಾಗದೆ ಜನರು ನಿತ್ಯ ಪರದಾಡುವಂತಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ವರ್ಷಕ್ಕೆ ಮೂರು ಬಾರಿ ಕಾನೂನು ತಿದ್ದುಪಡಿ ಮಾಡುತ್ತಿರುವುದರಿಂದ ರಾಜ್ಯದಲ್ಲಿನ ನಗರಸಭೆ, ಮಹಾನಗರ ಪಾಲಿಕೆಗಳು ಸಮಸ್ಯೆಗೀಡಾಗಿವೆ. ಇವರ ಕಠಿಣ ಕಾನೂನುಗಳಿಂದಾಗಿ ನಗರದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದೇ ದುಸ್ತರವಾಗಿದೆ. ಮನೆ ಕಟ್ಟಡಕ್ಕೆ ಅನುಮತಿ ಕೊಡುತ್ತಿಲ್ಲ. ಹಲವಾರು ಅರ್ಜಿ ಸಲ್ಲಿಸಲು ವೆಬಸೈಟ್ ಓಪನ್ ಆಗುತ್ತಿಲ್ಲ, ಸರ್ವರ್ ಸಮಸ್ಯೆ ಸೇರಿದಂತೆ ನಿತ್ಯ ಪಾಲಿಕೆಗೆ ಜನರು ಅಲೆದಾಡುವುದಾಗಿದೆ. ಈ ಕುರಿತು ಪಾಲಿಕೆ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡವರ ಮನೆಗೆ ವಿದ್ಯುತ್ತಿಗಾಗಿ ಹೆಸ್ಕಾಂ ಗೆ ಹೋದರೆ ಅವರು ವಿದ್ಯುತ್ ಕೊಡುತ್ತಿಲ್ಲ. ಗುಂಟಾ ಮನೆಗಳಿಗೆ ಅನುಮತಿ ಬಿ ಖಾತಾ ಮಾಡಲು ಆಗುತ್ತಿಲ್ಲ, ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡಿದ್ದಾರೆ. ಒಂದು ತಿಂಗಳಲ್ಲಿ ಆಗುವ ಕೆಲಸ ಎಂಟು ತಿಂಗಳು ಒಯ್ಯುತ್ತಿದ್ದಾರೆ. ಸರ್ಕಾರ ಆದಷ್ಟು ಬೇಗ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರು ಚೌಧರಿ, ಕರಬಸಪ್ಪ ಅರಕೇರಿ ಇದ್ದರು.