ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಯಾವುದೇ ಪ್ರದೇಶ ಪ್ರಗತಿಯಾಗಬೇಕಾದರೇ ಆರ್ಥಿಕ ಚಟುವಟಿಕೆಗಳು ಬೇಕು. ಇದಕ್ಕಾಗಿ ಅವಕಾಶ ನೀಡುವುದರಿಂದ ವ್ಯವಹಾರಗಳು, ಉದ್ದಿಮೆಗಳು ಶುರುವಾಗುತ್ತವೆ. ಹೀಗಾಗಿ ಹಜಾರೆ ಪರಿವಾರದ ಸಾಹಸದಿಂದ ರಬಕವಿ ಮಾರುಕಟ್ಟೆ ವಿಸ್ತರಣೆಗೊಂಡಿದೆ ಎಂದು ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಖ್ಯಾತ ಸರ್ಜನ್ ಡಾ.ಮಹಾವೀರ ದಾನಿಗೊಂಡ ಹೇಳಿದರು.ಹಜಾರೆ ಬಜಾರ್ ಪಕ್ಕದ ಜಾಗದಲ್ಲಿ ಮಹಾಲಿಂಗಪುರ, ತೇರದಾಳ, ಹಳಿಂಗಳಿ, ಚಿಮ್ಮಡ, ತಮದಡ್ಡಿ, ಯಲ್ಲಟ್ಟಿ ಪ್ರದೇಶಗಳ ಹಿರಿಯರ ಸಮ್ಮುಖದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಿಂಗಪುರ ನಾಕಾ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಹೆಚ್ಚಳವಾಗಲು ಹಜಾರೆ ಟೆಕ್ಸ್‌ಟೈಲ್ ಆರಂಭಗೊಂಡಿದ್ದೇ ಕಾರಣ. ಇಂದು ನಗರ ಪ್ರದೇಶಗಳಿಗಿಂತ ಹೆಚ್ಚಿನ ವಹಿವಾಟು ಪ್ರದೇಶ ಇದಾಗಿದೆ. ಸದ್ಯ ಹಜಾರೆ ಬಜಾರ್ ಬಹುಕೋಟಿ ಮೊತ್ತದ ಅತೀ ದೊಡ್ಡ ಬಜಾರ್ ಆರಂಭಿಸಿದ್ದು, ಹಜಾರೆ ಪರಿವಾರದ ಸಾಹಸ ಪ್ರಶಂಸಾರ್ಹ ಎಂದು ಶ್ಲಾಘಿಸಿದರು.ಉದ್ಯಮಿ ಗಣಪತರಾವ್ ಹಜಾರೆ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ವಸಂತರಾವ್ ಹಜಾರೆ, ಅಶೋಕ ಅಂಗಡಿ, ಸಿದ್ಧರಾಜ ಪೂಜಾರಿ, ಪ್ರಕಾಶ ದೇಸಾಯಿ ಉಪಸ್ಥಿತರಿದ್ದರು. ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ರಾಮಣ್ಣ ಹುಲಕುಂದ, ಪರಪ್ಪ ಬಿಳ್ಳೂರ ಪ್ರಾರಂಭೋತ್ಸದ ದಿನ ಅ.7 ರಂದು ನಡೆಯುವ ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಚರ್ಚಿಸಿದರು. ಮುಗಳಖೊಡ-ಜಿಡಗಾ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಚಡಚಣದ ಜವಳಿ ವರ್ತಕ ಬಾಹುಬಲಿ ಮುತ್ತಿನ ಉದ್ಘಾಟಿಸಲಿದ್ದಾರೆ. ಮಾತೆ ಪದ್ಮಾವತಿ ವಿ.ಹಜಾರೆ, ಗಣಪತರಾವ್ ಹಜಾರೆ, ವಸಂತರಾವ್ ಹಜಾರೆ, ಉದಯ ಬಾ.ಹಜಾರೆ ಜ್ಯೋತಿ ಬೆಳಗಿಸಲಿದ್ದಾರೆ. ಗೃಹಬಳಕೆ, ಅಲಂಕಾರಿಕ ಪೀಠೋಪಕರಣಗಳು, ಗೃಹಬಳಕೆಯ ದಿನಸಿಗಳು, ವಿವಿಧ ಕಂಪನಿಗಳ ಇಲೆಕ್ಟ್ರಾನಿಕ್ ವಸ್ತುಗಳು, ಫುಡ್ ಕೋರ್ಟ್, ಮದುವೆ, ಶುಭ ಕಾರ್ಯಗಳ ಉಪಕರಣಗಳು, ಟಾಯ್ಸ್ ಮತ್ತು ಕಾಣಿಕೆಗಳು, ಸ್ಟೇಶನರಿ, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಎಲ್ಲ ವಿಧದ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತೆ ಹಜಾರೆ ಪರಿವಾರ ಬಹು ದೊಡ್ಡ ಸಾಹಸ ಮಾಡಿರುವುದು ಗ್ರಾಹಕ ಸ್ನೇಹಿಯಾಗಿದೆ ಎಂದು ಹುಲಕುಂದ ವಿವರಿಸಿದರು.ಸಂಜಯ ತೆಗ್ಗಿ ಕಾರ್ಯಕ್ರಮ ನಿರ್ವಹಿಸಿದರು. ವಿಜಯಕುಮಾರ ಹಲಕುರ್ಕಿ ವಂದಿಸಿದರು. ಡಾ.ಅಭಿನಂದನ ಡೋರ್ಲೆ, ಮಲ್ಲಿಕಾರ್ಜುನ ನಾಶಿ, ಸಿದ್ದನಗೌಡ ಪಾಟೀಲ, ಶ್ರೀಶೈಲ ದಲಾಲ, ಧರೆಪ್ಪ ಉಳ್ಳಾಗಡ್ಡಿ, ನೀಲಕಂಠ ಮುತ್ತೂರ, ಪ್ರಭು ಹಿಪ್ಪರಗಿ, ಮಹಾವೀರ ಕೊಕಟನೂರ ಸೇರಿದಂತೆ ರಬಕವಿ-ಬನಹಟ್ಟಿ ಸುತ್ತಲಿನ ಗ್ರಾಮಗಳ ಪ್ರಮುಖರು ಪಾಲ್ಗೊಂಡಿದ್ದರು.
ಕರ್ನಾಟಕ-ಮಹಾರಾಷ್ಟ್ರಗಳಲ್ಲೇ ಅತೀ ದೊಡ್ಡ ಬಜಾರ್ ರಬಕವಿಯ ನೂತನ ಬಸ್ ನಿಲ್ದಾಣದ ಬಳಿ ಆರಂಭಗೊಳ್ಳುತ್ತಿರುವುದು ಸಂತಸದ ವಿಚಾರ. ಬೆಂಗಳೂರು, ಪುಣೆ ಹೊರತಾಗಿ ಬೇರೆಲ್ಲೂ ಇಲ್ಲದ ದೊಡ್ಡ ಬಜಾರ್ ಆರಂಭಿಸಲು ಉದ್ಯಮಿ ಸತೀಶ ಹಜಾರೆ ಮುಂದಾಗಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣದ ಪ್ರದೇಶದಲ್ಲೂ ಆರ್ಥಿಕ ಪೂರಕ ಚಟುವಟಿಕೆಗಳು ಆರಂಭವಾಗಿ ನೂರಾರು ಕುಟುಂಬಗಳಿಗೆ ಸಹಾಯವಾಗಲಿದೆ.-ಡಾ.ಮಹಾವೀರ ದಾನಿಗೊಂಡ,
ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಖ್ಯಾತ ಸರ್ಜನ್.