ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಜಿಲ್ಲೆ ಅಭಿವೃದ್ಧಿ ನಿರ್ಲಕ್ಷಿತ ಜಿಲ್ಲೆ. ಪ್ರಗತಿಯ ವಿಚಾರದಲ್ಲಿ ಎಲ್ಲಾ ಸರ್ಕಾರಗಳಿಂದಲೂ ನಿಕೃಷ್ಟಕ್ಕೊಳಗಾಗುತ್ತಲೇ ಬರುತ್ತಿದೆ. ಸಮರ್ಥ ರಾಜಕೀಯ ನಾಯಕತ್ವದ ಕೊರತೆಯೂ ಇದಕ್ಕೆ ಕಾರಣವೆಂದರೂ ತಪ್ಪಿಲ್ಲ. ಇದರ ನಡುವೆಯೇ ಮತ್ತೊಂದು ರಾಜ್ಯ ಬಜೆಟ್ ಬಂದಿದೆ. ಜಿಲ್ಲೆಗೆ ಏನೇನು ಸಿಗಬಹುದೆಂಬ ಬಗ್ಗೆ ನಿರೀಕ್ಷೆಗಳು ಮತ್ತೆ ಗರಿಗೆದರಿವೆ.
ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ, ಕೆಆರ್‌ಎಸ್ ಬೃಂದಾವನ ಉನ್ನತೀಕರಣ, ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲೂಕಿನ ಮಾಧವಮಂತ್ರಿ ನಾಲೆ, ಮದ್ದೂರು ತಾಲೂಕಿನ ಕೆಮ್ಮಣ್ಣುಗುಂಡಿ ನಾಲೆ ಆಧುನೀಕರಣ, ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ, ಆದಿ ಚುಂಚನಗಿರಿಯಲ್ಲಿ ವಿಜ್ಞಾನ ಕೇಂದ್ರ, ಸಾರ್ವಜನಿಕ ಪ್ರಯೋಗಾಲಯ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿತ್ತು.ಕೃಷಿ ವಿಶ್ವವಿದ್ಯಾಲಯ ವರದಿ ಸಲ್ಲಿಕೆ:
ವಿ.ಸಿ.ಫಾರಂನಲ್ಲಿ ನೂತನವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಶ್ರಾಂತ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಆರು ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿ ಮೂರುವರೆ ತಿಂಗಳಲ್ಲಿ ಸರ್ಕಾರಕ್ಕೆ ೧೩೦ ಪುಟಗಳ ವರದಿ ಸಲ್ಲಿಸಿದೆ. ನೂತನ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಮಂಡ್ಯ, ಮೈಸೂರು, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಸೇರ್ಪಡೆ ಮಾಡಬೇಕು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿವಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಕೆಲವು ಸಂಸ್ಥೆಗಳನ್ನು ಹೊಸ ವಿವಿಗೆ ವಿಲೀನಗೊಳಿಸಬೇಕು ಎಂದು ತಿಳಿಸಿದೆ. ಇದಕ್ಕೆ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಇದು ಕ್ಯಾಬಿನೇಟ್‌ನಲ್ಲಿ ಅಂತಿಮವಾಗಿ ತೀರ್ಮಾನವಾಗಬೇಕಿದೆ.ಹೊಸ ಕಾರ್ಖಾನೆ ನಿರ್ಧಾರವಾಗಿಲ್ಲ:
ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಆಸಕ್ತಿದಾಯಕವಾಗಿಲ್ಲ. ಈಗಿರುವ ಮೈಷುಗರ್ ಕಾರ್ಖಾನೆಯನ್ನು ಈಗಿರುವ ಸ್ಥಳದಲ್ಲೇ ಆಧುನೀಕರಣಗೊಳಿಸುವುದಕ್ಕೆ ನಿರ್ಧರಿಸಿದೆ. ಮೈಷುಗರ್ ವ್ಯಾಪ್ತಿಯಲ್ಲಿ ಕಬ್ಬು ಕಡಿಮೆ ಇರುವುದರಿಂದ ೧೦ ಸಾವಿರ ಟಿಸಿಡಿ ಸಾಮರ್ಥ್ಯದ ಹೊಸ ಕಾರ್ಖಾನೆ ಸ್ಥಾಪಿಸಿದರೆ ಯಾವುದೇ ಪ್ರಯೋಜನವಾಗದು. ಹಾಲಿ ಕಾರ್ಖಾನೆಯ ಒಂದು ಮಿಲ್‌ನ್ನು ೩೦೦೦ ಟಿಸಿಡಿಯಿಂದ ೫ ಸಾವಿರಕ್ಕೆ ಹೆಚ್ಚಿಸಿ ಕಾರ್ಖಾನೆಯನ್ನು ಮುನ್ನಡೆಸುವ ಹಾದಿಯಲ್ಲಿ ಸಾಗುತ್ತಿದೆ. ಕಾರ್ಖಾನೆಯ ಆಸ್ತಿಯನ್ನು ಅಡಮಾನ ಮಾಡಿ ಪುನಶ್ಚೇತನಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಹಣಕಾಸು ಇಲಾಖೆ ಅನುದಾನ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ಇನ್ನು ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಆರಂಭಿಸುವ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.ನಿರ್ಮಾಣ ಹಂತದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡ:
ಆದಿಚುಂಚನಗಿರಿ ಕ್ಷೇತ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಕ್ಷೇತ್ರದ ರಥದ ಬೀದಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಕೇಂದ್ರದಲ್ಲಿ ಜೀವವೈವಿಧ್ಯದ ವಿಕಾಸ, ಅರಣ್ಯಸಂಪತ್ತು, ಪ್ರಾಣಿಸಂಕುಲ, ಜಲಚರಗಳು, ವಿನಾಶ ಹೊಂದಿರುವ ವಿವಿಧ ಪ್ರಭೇದದ ಪುರಾತನ ಪ್ರಾಣಿ-ಪಕ್ಷಿಗಳ ಕುರಿತು ಸಮಗ್ರ ಮಾಹಿತಿ. ನಕ್ಷತ್ರಪುಂಜ, ಆಕಾಶಕಾಯಗಳು, ನಭೋಮಂಡಲದ ವಿಸ್ಮಯ, ವೈವಿಧ್ಯತೆಯನ್ನು ಪರಿಚಯಿಸುವುದು ಇದರ ಹಿಂದಿನ ಉದ್ದೇಶವಾಗಿದೆ.ಇನ್ನುಳಿದಂತೆ ಕೆಆರ್‌ಎಸ್ ಬೃಂದಾವನ ಉನ್ನತೀಕರಣ, ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲೂಕಿನ ಮಾಧವಮಂತ್ರಿ ನಾಲೆ, ಮದ್ದೂರು ತಾಲೂಕಿನ ಕೆಮ್ಮಣ್ಣುಗುಂಡಿ ನಾಲೆ ಆಧುನೀಕರಣ, ಸಾರ್ವಜನಿಕ ಪ್ರಯೋಗಾಲಯ ಸ್ಥಾಪನೆ ಯೋಜನೆಗಳು ಇಂದಿಗೂ ನೆನೆಗುದಿಗೆ ಬಿದ್ದಿವೆ.ಮತ್ತೆ ಗರಿಗೆದರಿದ ನಿರೀಕ್ಷೆಗಳು
ರಾಜ್ಯ ಬಜೆಟ್ ಮಂಡನೆಯಾಗುತ್ತಿರುವುದರಿಂದ ಜಿಲ್ಲೆಯ ನಿರೀಕ್ಷೆಗಳೆಲ್ಲವೂ ಮತ್ತೆ ಗರಿಗೆದರಿವೆ. ನಗರಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೆದ್ದಾರಿ ಪಕ್ಕದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ, ಶೀತಲೀಕರಣ ಕೇಂದ್ರಗಳ ಸ್ಥಾಪನೆ, ನಗರಕ್ಕೊಂದು ರಿಂಗ್ ರಸ್ತೆ, ರಸ್ತೆಗಳ ಅಭಿವೃದ್ಧಿಗೆ ಅನುದಾನ, ಬೃಹತ್ ಮಂಡ್ಯ ಯೋಜನೆ, ದಂತ ವೈದ್ಯಕೀಯ ಕಾಲೇಜು ಹೀಗೆ ಹಲವಾರು ನಿರೀಕ್ಷೆಗಳು ಬಜೆಟ್ ಸಮಯದಲ್ಲಿ ಪುಟಿದೇಳುತ್ತವೆ.ಪ್ರತಿ ವರ್ಷದ ಬಜೆಟ್‌ನಲ್ಲೂ ಇದೇ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಇವೇನು ಹೊಸ ನಿರೀಕ್ಷೆಗಳೇನೂ ಅಲ್ಲ, ಹಲವಾರು ವರ್ಷಗಳಿಂದ ಎದುರುನೋಡುತ್ತಿರುವ ಕನಸಿನ ಯೋಜನೆಗಳಾಗಿವೆ. ಆದರೆ, ಸಾಕಾರಗೊಳ್ಳುವ ಅದೃಷ್ಟ ಮಾತ್ರ ಕೂಡಿಬರುತ್ತಿಲ್ಲದಿರುವ ಬಗ್ಗೆ ನಗರದ ಜನರಲ್ಲಿ ತೀವ್ರ ವಿಷಾದವಿದೆ.
ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ೬ ಮಂದಿ ಕಾಂಗ್ರೆಸ್ ಶಾಸಕರು ಯಾವ ರೀತಿಯಲ್ಲಿ ಅಭಿವೃದ್ಧಿ ಕುರಿತಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವರೋ ಗೊತ್ತಿಲ್ಲ. ಆದರೆ, ಅಭಿವೃದ್ಧಿ ಜಿಲ್ಲೆಯೊಳಗೆ ನಿಂತ ನೀರಾಗಿದೆ. ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಎಂದು ದೂರವಾಗುವುದೋ ಎನ್ನುವುದು ಜಿಲ್ಲೆಯ ಜನರ ಯಕ್ಷಪ್ರಶ್ನೆಯಾಗಿದೆ.