ಸರ್ಕಾರದ ಯೋಜನೆ, ಸಮಾಜಮುಖಿ ಕಾರ್ಯಕ್ರಮಗಳ ಅನಾವರಣ

| Published : Oct 05 2025, 01:00 AM IST

ಸಾರಾಂಶ

ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಪರಿಚಯ

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಎಲ್ಲಾ ಇಲಾಖೆಗಳಿಂದ ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಪರಿಚಯ ಹಾಗೂ ಸರ್ಕಾರ ನೀಡಿರುವ ಯೋಜನೆಗಳ ಅವಕಾಶಗಳ ಕುರಿತು ತಿಳಿಸಿಕೊಡಲಾಗುತ್ತಿದೆ.ರಾಜ್ಯದ ಜನತೆಯು ಯೋಜನೆಯ ಸವಲತ್ತು ಪಡೆಯುವಂತೆ ಮಾಡುವ ಉದ್ದೇಶದಿಂದ ಕಾರ್ಯಯೋಜನೆ ಮಾಹಿತಿ ನೀಡುವುದರ ಜೊತೆಗೆ ಪ್ರಾತ್ಯಕ್ಷಿಕೆಗಳ ಮೂಲಕ ಪ್ರಯತ್ನಿಸಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ನೂತನ ಮತ್ತು ಪುನರ್ ಉತ್ಪಾದಿಸಲ್ಪಡುವ ಇಂಧನಗಳ ಉತ್ಪಾದನೆಗೆ ಆದ್ಯತೆ ನೀಡಲಾಗಿದ್ದು, ಸೌರ ಮತ್ತು ಪವನ ಶಕ್ತಿಗಳ ಕ್ಷೇತ್ರದಲ್ಲಿ ಈಗಾಗಲೇ ಉತ್ತಮ ಸಾಧನೆ ಮಾಡಲಾಗಿದ್ದು ಜೈವಿಕ ಇಂಧನ ಕ್ಷೇತ್ರಕ್ಕೂ ಅದೇ ರೀತಿ ಒತ್ತು ನೀಡಿ ಕಾರ್ಯಯೋಜನೆಗಳ ನಿರೂಪಣೆ ಹಾಗೂ ಅನುಷ್ಠಾನಕ್ಕೆ ನೀಡುತ್ತಿರುವುದು ಈ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ದಸರಾ ವಸ್ತು ಪ್ರದರ್ಶನದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ಮೂಲಕ ಇಲಾಖೆಯ ಎಲ್ಲಾ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕಾರ್ಯಯೋಜನೆಗಳ ಪ್ರಾತ್ಯಕ್ಷಿಕೆಗಳ ಮೂಲಕ ಆಯೋಜಿಸಲಾಗಿದೆ.ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯ ಯೋಜನೆ, ಮುಂದಿನ ರೂಪುರೇಷೆಗಳ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಆಯೋಜಿಸಿರುವ ಜೈವಿಕ ಇಂಧನ ಮಳಿಗೆ ಉದ್ಘಾಟಿಸಿದರು.ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ನೂತನ ಕಾರ್ಯ ಯೋಜನೆ ರೂಪಿಸುತ್ತಿದ್ದು, ಇತ್ತೀಚಿಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಯೋಡೇಸಲ್ ಬಿ 100 ಮಾರಾಟಕ್ಕೆ ಮಂಡಳಿಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಿರುವುದನ್ನು ಹಾಗೂ ಮುಕ್ತ ಮಾರಾಟಕ್ಕಾಗಿ ರಿಟೇಲ್ ಔಟ್ಲೆಟ್ ಸ್ಥಾಪಿಸಲು ಅನುಕೂಲವಾಗುವಂತೆ ಮಾಡುವ ಕುರಿತು ಆದೇಶ ಹೊರಡಿಸುವುದರೊಂದಿಗೆ ಮಾರ್ಗಸೂಚಿ ಹೊರಡಿಸಿರುವುದರ ಕುರಿತು ಪ್ರಸ್ತಾಪಿಸಿದರು.ಮೈಸೂರು ನಗರದಲ್ಲಿನ ತ್ಯಾಜ್ಯ ಸಂಗ್ರಹಣೆ, ಜೈವಿಕ ಇಂಧನ ಉತ್ಪಾದನೆ ಹಾಗೂ ವಿತರಣೆ ಕುರಿತು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಯೋ ಡೀಸೆಲ್, ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದಿಸಿ ವಿತರಣೆ ಕುರಿತು ಕಾರ್ಯ ಯೋಜನೆ ರೂಪಿಸಬಹುದಾಗಿದೆ ಎಂದು ತಿಳಿಸಿದರು.ಇನ್ನು ಕೆಲವೇ ತಿಂಗಳಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಯಾಗಲಿದ್ದು ಬಂಡವಾಳ ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಾಣ ರಚನೆಯಾಗುವುದರ ಕುರಿತು ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.ರಾಜ್ಯ ಸರ್ಕಾರವು ಜೈವಿಕ ಇಂಧನ ಕ್ಷೇತ್ರದಲ್ಲಿ ವಿವಿಧ ಜೈವಿಕ ಇಂಧನಗಳ ಉತ್ಪಾದನೆಗೆ ಒತ್ತು ನೀಡಲು ಅನುಕೂಲವಾಗುವಂತೆ ಹಲವು ಪ್ರೋತ್ಸಾಹ, ಸಬ್ಸಿಡಿ ನೀಡಲು ಮುಂದಾಗಿರುವುದನ್ನು ಪ್ರಶ0ಸಿಸಿ ಸದ್ಯದಲ್ಲಿ ಅನುಷ್ಠಾನಗೊಳ್ಳಲಿವೆ ಎಂದು ಆಶಿಸಿದರು.ಈ ವಿಶ್ವವಿಖ್ಯಾತಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ವಸ್ತು ಪ್ರದರ್ಶನದಲ್ಲಿ ಮಂಡಳಿ ಭಾಗಿಯಾಗಿ ಜೈವಿಕ ಇಂಧನ ಕ್ಷೇತ್ರದ ಪೂರ್ಣ ಪರಿಚಯವನ್ನು ಕ್ಷೇತ್ರದ ವಿವಿಧ ಬಾಗಿದಾರರುಗಳಿಗೆ ಮಾಡಿಕೊಡಲಿದ್ದು ಅವರುಗಳು ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಕಚ್ಚಾ ವಸ್ತುಗಳ ಪೂರೈಕೆ, ಉತ್ಪಾದನೆ, ವಿತರಣೆ ಮುಂತಾದ ವಿಭಾಗಗಳಲ್ಲಿ ಕೈಜೋಡಿಸಲಿದ್ದಾರೆ ಎಂಬ ನಂಬಿಕೆ ಇದ್ದು, ದೇಶದ ಇಂಧನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಅವರು ಹೇಳಿದರು.ಈ ವೇಳೆ ಮಂಡಳಿಯ ಎಂಡಿ ಎಲ್‌. ಶಿವಶಂಕರ್, ಹುಣಸೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಫಯಾಜ್, ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್‌. ಲೋಹಿತ್, ಯೋಜನಾ ಸಲಹೆಗಾರ ಡಾ.ಜಿ.ಎನ್‌. ದಯಾನಂದ, ಎನ್ಐಇ ಕಾಲೇಜಿನ ಬಿಆರ್ಐಡಿಸಿ ಕೇಂದ್ರದ ಸಂಯೋಜಕ ಡಾ. ಶ್ಯಾಮ್ ಸುಂದರ್, ಸಹೋದ್ಯೋಗಿ ಶಿವಪ್ರಕಾಶ್, ಪ್ರಸಾದ್, ಡೀಡ್ ಸಂಸ್ಥೆಯ ಸ0ಚಾಲಕ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.