ಸಾರಾಂಶ
ಕಡಿಮೆ ಮತದಾನವಾಗುವ ಪ್ರದೇಶದಲ್ಲಿ ಜನರಿಗೆ ಮತದಾನ ಕುರಿತು ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಡೀಸಿ ಗೋವಿಂದರೆಡ್ಡಿ ಸೂಚಿಸಿದರು. ಔರಾದ್‌ನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಬೆಳಗ್ಗೆ ಮತದಾನ ಜಾಗೃತಿ ವಾಕ್‌ಥಾನ್ ಜರುಗಿತು.
ಕನ್ನಡಪ್ರಭ ವಾರ್ತೆ ಔರಾದ್
ಔರಾದ್, ಕಮಲನಗರ ಕ್ಷೇತ್ರದ ವ್ಯಾಪ್ತಿಯ ಕಡಿಮೆ ಮತದಾನವಾಗುವ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ವಾಕ್‌ಥಾನ್ ಆಯೋಜಿಸಲಾಗಿದೆ. ನೌಕರರು ಮತದಾನದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಲೋಕಸಭಾ ಚುನಾವಣೆ ಹಿನ್ನೆಲೆ ಕಡಿಮೆ ಮತದಾನವಾಗುತ್ತಿರುವ ಮತಗಟ್ಟೆ ಪ್ರದೇಶಗಳಲ್ಲಿ ಮತದಾನ ಹೆಚ್ಚಳ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಬೆಳಗ್ಗೆ ಮತದಾನ ಜಾಗೃತಿ ವಾಕ್‌ಥಾನ್ ಜರುಗಿತು. ಈ ವೇಳೆ ಅವರು ಮಾತನಾಡಿದರು.
ಜಿಪಂ ಸಿಇಒ ಡಾ. ಗಿರೀಶ ಬದೋಲೆ ಪ್ರತಿಜ್ಞಾವಿಧಿ ಬೋಧನೆ ಮಾಡಿ ಮಾತನಾಡಿ, ತಾಲೂಕಿನ ಕಡಿಮೆ ಮತದಾನವಾಗುವ ಗ್ರಾಮಗಳು ಗುರುತಿಸಿ ಅಂತಹ ಕಡೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದರು.ಎಸ್‌ಪಿ ಚೆನ್ನಬಸವಣ್ಣ ಎಸ್.ಎಲ್ ಮಾತನಾಡಿ, ಮತದಾರರ ಜಾಗೃತಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ ಎಂದರು.
ಪಟ್ಟಣದ ಕನ್ನಡಾಂಬೆ ವೃತ್ತದಿಂದ ತಹಸೀಲ್ ಕಚೇರಿಯವರೆಗೆ ಕಾಲ್ನಡಿಗೆ ಮೂಲಕ ಜಾಗೃತಿ ಮೂಡಿಸಲಾಯಿತು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಕೃಷಿ ಅಧಿಕಾರಿ ಸಹಾಯಕ ಚುನಾವಣಾಧಿಕಾರಿ ಜಿಯಾವುಲ್ಲಾ ಖಾನ್, ತಹಸೀಲ್ದಾರ್ ನಾಗಯ್ಯ ಹಿರೇಮಠ, ಬಿಇಒ ಟಿ.ಆರ್ ದೊಡ್ಡಿ, ಅನೀಲಕುಮಾರ್, ಸಿಪಿಐ ರಘುವೀರಸಿಂಗ್ ಠಾಕೂರ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಎಲ್ಲ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.