ಅಡಕೆಯಲ್ಲಿ ಕಲಬೆರಕೆ ಮೋಸದ ಆರೋಪ ಸತ್ಯಕ್ಕೆ ದೂರ

| Published : Nov 13 2024, 12:03 AM IST

ಸಾರಾಂಶ

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮ್ಯಾಮ್ಕೋಸ್ ಸಂಸ್ಥೆಯ ಮೇಲೆ ರಾಜಕೀಯ ದುರುದ್ದೇಶದಿಂದ ಅಡಕೆಯಲ್ಲಿ ಕಲಬೆರಕೆ, ರೈತರಿಗೆ ಮೋಸ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈ ಬಗ್ಗೆ ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮ್ಯಾಮ್ಕೋಸ್ ಸಂಸ್ಥೆಯ ಮೇಲೆ ರಾಜಕೀಯ ದುರುದ್ದೇಶದಿಂದ ಅಡಕೆಯಲ್ಲಿ ಕಲಬೆರಕೆ, ರೈತರಿಗೆ ಮೋಸ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈ ಬಗ್ಗೆ ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.ಸೋಮವಾರ ಸಂಜೆ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಮ್ಕೋಸ್ ಯಾವತ್ತೂ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಪೂರಕವಾಗಿ, ಪಾರದರ್ಶಕವಾಗಿ ಮತ್ತು ಕಂಕಣ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಮ್ಯಾಮ್ಕೋಸ್ ಆಡಳಿತ ಮಂಡಳಿಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಕೀಯ ಹಿತಾಸಕ್ತಿಯಲ್ಲಿ ರೈತರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರ ನಡೆದಿದೆ. ಯಾವುದೇ ಸಾಕ್ಷಾಧಾರ ಇಲ್ಲದೇ ರಾಜಕೀಯ ಪ್ರೇರಿತವಾಗಿ ಸಾರ್ವಜನಿಕವಾಗಿ ಸಂಸ್ಥೆಯ ಮೇಲೆ ಆರೋಪ ಮಾಡಿದರೆ ಅಂತವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.ಮ್ಯಾಮ್ಕೋಸ್ ಸಂಸ್ಥೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಈ ಮೂರು ಜಿಲ್ಲಾ ವ್ಯಾಪ್ತಿಯಲ್ಲಿ 12 ಶಾಖೆಗಳನ್ನು ಹೊಂದಿದೆ. ಕೇವಲ ತೀರ್ಥಹಳ್ಳಿ ತಾಲೂಕಿನ ಕೆಲವೇ ವ್ಯಕ್ತಿಗಳಿಂದ ಮಾತ್ರ ಇಂತಹ ಊಹಾಪೂಹ ಆರೋಪಗಳು ಕೇಳಿ ಬಂದಿದೆ. ಖಾಸಗಿಯವರ ಶೋಷಣೆಯನ್ನು ನಿಯಂತ್ರಿಸಿದ ಸಂಸ್ಥೆಯ ವ್ಯವಹಾರದ ಬಗ್ಗೆ ಸತ್ಯಾಂಶವನ್ನು ಅರಿಯದೇ ಸಂಸ್ಥೆಯ ಕುರಿತು ಅಪಪ್ರಚಾರ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದರು.2023-24 ನೇ ಸಾಲಿನಲ್ಲಿ ತೀರ್ಥಹಳ್ಳಿ ಶಾಖೆಗೆ 57395 ಮೂಟೆ ಅಡಕೆ ಆವಕವಾಗಿದ್ದು, 53908 ಮೂಟೆ ಮಾರಾಟವಾಗಿದೆ. ಈ ಸಾಲಿನಲ್ಲಿ ಕೇವಲ 216 ಮೂಟೆ ಮಾತ್ರ ವಾಪಾಸು ಹೋಗಿದ್ದು, ಆವಕವಾದ 57395 ಮೂಟೆಗೆ ಹೋಲಿಸಿದಲ್ಲಿ ವಾಪಾಸಾದ 216 ಮೂಟೆ ನಗಣ್ಯವಾಗಿರುತ್ತದೆ. ಕಳೆದ ಸಾಲಿಗಿಂತ 46171 ಮೂಟೆ ಹೆಚ್ಚಿಗೆ ಅಡಕೆ ಮಾರಾಟವಾಗಿದ್ದು, ಇದು ರೈತರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ ಎಂದರು.ಲಾಗಾಯ್ತಿನಿಂದಲೂ ಆಡಿಟ್ ಶ್ರೇಣಿಯಲ್ಲಿ ಸಂಸ್ಥೆ ಎ ಗ್ರೇಡ್ ಪಡೆಯುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಸಂಸ್ಥೆಯ ಎಲ್ಲಾ ಗೋದಾಮುಗಳಲ್ಲಿ ಸಿಸಿ ಟಿವಿ ಅಳವಡಿಸಿದೆ. ಅಡಕೆಗೆ ಶಿಲೀಂಧ್ರ ಬಾರದ ಹಾಗೆ ಮಳೆಗಾಲದಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಪಲ್ಟಾಯಿಸುವುದಲ್ಲದೇ ಬೇರೆ ಯಾವುದೇ ಸಂಧರ್ಭದಲ್ಲಿ ಸದಸ್ಯರ ಅಡಕೆಯನ್ನು ಮಿಕ್ಸ್ ಮಾಡುವುದಾಗಲಿ ಅಥವಾ ಇನ್ನಿತರ ವರ್ಗಾವಣೆ ಮಾಡುವುದಿಲ್ಲಾ ಎಂದೂ ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೆಶಕರಾದ ಸಿ.ಬಿ. ಈಶ್ವರ್, ಅರುಣ್ ಕುಮಾರ್ ಹಾಗೂ ಜಯಶ್ರಿ ಇದ್ದರು.