ಪ್ರಾಚೀನ ಗಮಕ ಕಲೆ ಉಳಿಸಿ, ಬೆಳೆಸಬೇಕು

| Published : Oct 23 2024, 12:36 AM IST

ಸಾರಾಂಶ

ಗಮಕ ಎನ್ನುವುದು ಪದ್ಯ ಮತ್ತು ಚಂಪೂ ಕಾವ್ಯಗಳನ್ನು ರಾಗಬದ್ಧವಾಗಿ ಓದುವ ಒಂದು ವೈಶಿಷ್ಟಮಯ ಪದ್ದತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ, ಕಾವ್ಯದ ಅರ್ಥ, ಭಾವ ಮತ್ತು ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು, ರಸಭಾವ ಕೆಡದಂತೆ, ಕವಿ ಬಳಸಿದ ಛಂದಸ್ಸು,ರಾಗ ಮತ್ತು ಶೃತಿ ಬದ್ಧವಾಗಿ ಕಾವ್ಯವನ್ನು ಓದುವುದೇ ಗಮಕ ಕಲೆ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಗಮಕ ಕಲೆ ಅತ್ಯಂತ ಪ್ರಾಚೀನವಾದದ್ದು ಶಾಲೆಯಿಂದ ಹೋರಗೆ ಭರತನಾಟ್ಯ, ಸಂಗೀತ ತರಗತಿಗಳಂತೆ ಇಂದಿನ ಪೀಳಿಗೆಗೆ ಗಮಕವನ್ನು ಕಲಿಸುವಂತಾಗಬೇಕು ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ದಕ್ಷಿಣಾಮೂರ್ತಿ ಮನವಿ ಮಾಡಿದರು. ಅವರು ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಮಕ ವಾಚನ-ವಾಖ್ಯಾನ ಉದ್ಘಾಟಿಸಿ ಮಾತನಾಡಿ, ರಾಮಾಯಣ, ಮಹಾಭಾರತ, ಭಾಗವತ ಕಥೆಗಳನ್ನು ಗಮಕ ಶೈಲಿಯಲ್ಲಿ ಹೇಳುತ್ತಿದ್ದರು. ಹೀಗೆ ಜನರಿಗೆ ಕಾವ್ಯಗಳನ್ನು ತಲುಪಿಸಿದವರು ಗಮಕಿಗಳು ಎಂದರು.ರಾಗಬದ್ಧವಾಗಿ ಓದುವ ಪದ್ಧತಿ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗಮಕ ಕಲಾ ಪರಿಷತ್ತು ಅಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿ, ಗಮಕ ಎನ್ನುವುದು ಪದ್ಯ ಮತ್ತು ಚಂಪೂ ಕಾವ್ಯಗಳನ್ನು ರಾಗಬದ್ಧವಾಗಿ ಓದುವ ಒಂದು ವೈಶಿಷ್ಟಮಯ ಪದ್ದತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ, ಕಾವ್ಯದ ಅರ್ಥ, ಭಾವ ಮತ್ತು ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು, ರಸಭಾವ ಕೆಡದಂತೆ, ಕವಿ ಬಳಸಿದ ಛಂದಸ್ಸು,ರಾಗ ಮತ್ತು ಶೃತಿ ಬದ್ಧವಾಗಿ ಕಾವ್ಯವನ್ನು ಓದುವುದನ್ನು ಗಮಕ ಕಲೆ ಎಂದು ಹೇಳಬಹುದು ಎಂದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ರಾಜ್ಯ ಸಂಚಾಲಕಿ ರೂಪಶ್ರೀ, ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಶಿಕ್ಷಕಿ ಆರತಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಶೇಖರಪ್ಪ, ಬ್ರಾಹ್ಮಣರ ಸಂಘದ ಅಧ್ಯಕ್ಷ ದಿವಾಕರ್, ಉಪನ್ಯಾಸಕ ಶೇಷಗಿರಿರಾವ್ ಗೋಪಿನಾಥ್‌ರಾವ್,ವಿಪ್ರ ಮಹಿಳಾ ಮಂಡಳಿಯ ಸುಜಾತ, ಇಂದಿರಾ, ಮೀನಾ ಮುಂತಾದವರು ಇದ್ದರು.