ಕಿರಿದಾದ ರಸ್ತೆಯಲ್ಲಿ ಪಾರ್ಕಿಂಗ್ ವಾಹನಗಳ ಕಿರಿಕಿರಿ

| Published : Jun 09 2024, 01:33 AM IST

ಸಾರಾಂಶ

ಚಿತ್ರದುರ್ಗದ ಅಂಬೇಡ್ಕರ್ ವೃತ್ತದಿಂದ ಗುರುಭವನದ ಮೂಲಕ ಕೋಟೆ ರಸ್ತೆಗೆಗೆ ಹೋಗುವ ಮಾರ್ಗದ ಮಧ್ಯೆ ಇರುವ ಕಿರಿದಾದ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡಿರುವುದು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಬಹುತೇಕ ಬಡಾವಣೆಗಳ ಕಿರಿದಾದ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲಾದ ವಾಹನಗಳಿಂದ ಇನ್ನಿಲ್ಲದ ಕಿರಿಕಿರಿ ಅನುಭವಿಸುವಂತಾಗಿದ್ದು ಒಂದೆಡೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ರಸ್ತೆ ಸ್ವಚ್ಛ ಮಾಡಲು ಪೌರ ಕಾರ್ಮಿಕರು ಅತೀವ ನೋವು ಅನುಭವಿಸುತ್ತಿದ್ದಾರೆ. ಈ ರಸ್ತೆಗಳಲ್ಲಿ ವಾಹನ ಸಂಚಾರವೆಂಬುದೇ ದುಸ್ತರವಾಗಿದೆ.

ನಗರ ಪ್ರದೇಶದಲ್ಲಿ ಕಿರಿದಾದ ನಿವೇಶನಗಳಲ್ಲಿ ಮನೆ ಕಟ್ಟುವುದರಿಂದ ಸಹಜವಾಗಿ ಕಾರು ಪಾರ್ಕಿಂಗ್‌ಗೆ ಜಾಗ ಸಿಗದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ನಿವಾಸಿಗಳು ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿ. ಆದರೆ ಈ ತರಹದ ಕಾಳಜಿಗಳು ವ್ಯಕ್ತವಾಗುತ್ತಿಲ್ಲ. ನಗರಸಭೆಗೆ ಈ ಬಗೆಗಿನ ನಿತ್ಯ ಹತ್ತಾರು ದೂರುಗಳು ಬರುತ್ತಿವೆ. ಏನು ಮಾಡಬೇಕೆಂಬ ತಲೆನೋವು ಅವರದ್ದಾಗಿದೆ.

ಹೊಸ ಬಡಾವಣೆಗಳಲ್ಲಿ ಕನಿಷ್ಟ 30ರಿಂದ ನಲವತ್ತು ಅಡಿಗಳಷ್ಟು ರಸ್ತೆಗೆ ಜಾಗ ಬಿಡಲಾಗುತ್ತದೆ. ಎರಡು ವಾಹನಗಳು ಸಲೀಸಾಗಿ ಮುಖಾಮುಖಿಯಾಗಿ ಸಂಚರಿಸಬಹುದಾಗಿದೆ. ಇಂಥಹ ಕಡೆ ಪಾರ್ಕಿಂಗ್ ಸಮಸ್ಯೆಯಾಗಿ ಕಾಣಿಸುವುದಿಲ್ಲ. ಮಾಲೀಕರು ಬೆಳಗ್ಗೆ ವಾಹನಗಳ ಒಯ್ದರೆ ಸಂಜೆ ಅವು ವಾಪಾಸ್ಸಾಗುತ್ತವೆ. ರಾತ್ರಿ ಮಾತ್ರ ಕಾರುಗಳು ಮನೆ ಮುಂಭಾಗ ನಿಲುಗಡೆಯಾಗಿರುತ್ತವೆ. ಆದರೆ ಕೆಲ ಬಡಾವಣೆಗಳಲ್ಲಿ ತಿಂಗಳು, ವರ್ಷಗಟ್ಟಲೆ ಕಾರುಗಳು ನಿಲ್ಲಿಸಲಾಗಿರುತ್ತದೆ. ಕೆಲವಂತೂ ಕೆಟ್ಟು ಹೋಗಿರುತ್ತವೆ. ವಾಹನಗಳಲ್ಲಿ ನಾಯಿ, ಹೆಗ್ಗಣ ವಾಸವಾಗಿರುತ್ತವೆ. ವಾಹನಗಳು ಪಲ್ಲಟವಾಗದೇ ಇರುವುದರಿಂದ ಅದರ ಅಡಿಯಲ್ಲಿ ಕಸದ ರಾಸಿ ಸಂಗ್ರಹವಾಗಿರುತ್ತದೆ. ಕೆಲವು ಸಾರಿ ಹಾವು ಸೇರಿಕೊಂಡು ತೊಂದರೆ ಕೊಡುತ್ತವೆ.

ಈ ತರಹದ ವಾಹನಗಳ ತೆರವು ಮಾಡಲು ಯಾರಿಗೆ ಹೇಳಬೇಕೆಂಬ ಸಮಸ್ಯೆ ನಗರಸಭೆ ಆಡಳಿತಕ್ಕೆ ಎದುರಾಗಿದೆ. ನಗರ ಸ್ಚಚ್ಛ ಮಾಡಲು ಹೋಗುವ ಪೌರ ಕಾರ್ಮಿಕರು ಕಾರು ನಿಂತಿರುವ ಪ್ರದೇಶ ಬಿಟ್ಟು ಉಳಿದಕಡೆ ಕಸ ಗುಡಿಸುತ್ತಾರೆ. ಗಾಳಿ ಬೀಸಿದಂತೆಲ್ಲ ಕಾರಿನಡಿ ಸಂಗ್ರಹವಾಗಿದ್ದ ಕಸ ಮತ್ತೆ ಬೀದಿಗೆ ಬರುತ್ತದೆ. ಕಾರಿನ ಕೆಳಭಾಗದಲ್ಲಿ ಹಂದಿಗಳು ವಾಸ್ತವ್ಯ ಹೂಡುವ ದೃಶ್ಯಗಳಿಗೆ ಕೊರತೆ ಇಲ್ಲ. ಕೆಲವು ಸಲ ಮಕ್ಕಳು ಆಟವಾಡಲು ಹೋಗಿ ಹಂದಿಮರಿ, ನಾಯಿಗಳ ಕೈಗೆ ಸಿಲುಕಿದ ಉದಾಹರಣೆಗಳಿವೆ.

ಎಲ್ಲೆಲ್ಲಿ ಸಂಕಷ್ಟ:

ಚಿತ್ರದುರ್ಗದ ಹಳೇ ಪ್ರದೇಶವಾದ ದೊಡ್ಡಪೇಟೆ, ಐಯ್ಯಣ್ಣನ ಪೇಟೆ, ಮಸೀದಿ ರಸ್ತೆ, ಚಿಕ್ಕಪೇಟೆ ಕಡೆ ಈಗಲೂ ಕಿರಿದಾದ ರಸ್ತೆಗಳಿವೆ. ಇಪ್ಪತ್ತು ಅಡಿಯಷ್ಟು ಅಗಲವಿಲ್ಲ. ಇಂತಹ ಕಡೆ ಮಾಲೀಕರು ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಪಕ್ಕದಲ್ಲಿ ಮತ್ತೊಂದು ವಾಹನ ಹೋಗಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ವೃತ್ತದಿಂದ ಗುರುಭವನದ ಮೂಲಕ, ಮಸೀದಿ ಹಾದು ಕೋಟೆಗೆ ಹೋಗುವ ರಸ್ತೆಗೆ ತೆರಳಬೇಕಾದರೆ ಇನ್ನಿಲ್ಲದ ಸಂಕಷ್ಟ ಎದುರಿಸಬೇಕು ಎಂಬುದು ವಾಹನ ಚಾಲಕರ ಅಭಿಪ್ರಾಯ. ಈ ರಸ್ತೆಯಲ್ಲಿ ತಿಂಗಳು ಗಟ್ಟಲೆ ಒಂದೆ ಕಡೆ ವಾಹನಗಳ ನಿಲ್ಲಿಸಲಾಗಿದ್ದು ಕೆಲವು ಕಾರುಗಳ ಟೈರುಗಳು ನೆಲಕ್ಕೆ ಅಂಟಿವೆ. ಪಂಕ್ಚರ್ ಆಗಿ ಬಹಳ ತಿಂಗಳುಗಳೇ ಕಳೆದಿವೆ. ಗುಜರಿಗೆ ಹಾಕುವ ವಾಹನಗಳೆಲ್ಲ ರಸ್ತೆಗಳ ಆಕ್ರಮಿಸಿಕೊಂಡಿವೆ. ಈ ವಾಹನಗಳ ಮಾಲೀಕರು ಯಾರು, ಈ ರೀತಿ ವರ್ಷಗಟ್ಟಲೆ ಯಾಕೆ ನಿಲ್ಲಿಸಿದ್ದಾರೆ ಎಂಬ ಬಗ್ಗೆ ಸಣ್ಣದೊಂದು ಮಾಹಿತಿಯೂ ಅಲ್ಲಿನ ನಿವಾಸಿಗಳಿಂದ ಸಿಗುವುದಿಲ್ಲ.

ಸಂಚಾರಿ ಪೊಲೀಸರಿಗೂ ಕೂಡಾ ಈ ವಾಹನಗಳು ತಲೆನೋವಾಗಿ ಪರಿಣಮಿಸಿವೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ತಂದು ಠಾಣೆ ಮುಂಭಾಗ ನಿಲ್ಲಿಸಲು ಜಾಗವಿಲ್ಲ. ಇವುಗಳ ಎಲ್ಲಿಗೆ ಒಯ್ಯಬೇಕು, ದಂಡ ಹೇಗೆ ವಿಧಿಸಬೇಕು ಎಂಬಿತ್ಯಾದಿ ಹೊಸ ನಮೂನೆ ಸಮಸ್ಯೆ ಸುಳಿಗೆ ಸಿಲುಕಿದ್ದಾರೆ. ಯಾರಿಂದಲಾದರೂ ದೂರು ಬಂದಲ್ಲಿ ಅಂತಹ ಜಾಗಕ್ಕೆಹೋಗಿ ಕಾರು ಬೇರೆಡೆಗೆ ಒಯ್ದು ನಿಲ್ಲಿಸಿ ಎಂದು ತಿಳಿ ಹೇಳಿ ವಾಪಾಸ್ಸಾಗುತ್ತಿದ್ದಾರೆ. ಆದರೆ ಸಂಚಾರಕ್ಕೆ ಉಂಟಾಗುತ್ತಿರುವ ಕಿರಿ ಕಿರಿ ಮಾತ್ರ ತಪ್ಪಿಲ್ಲ.ಕಿರಿದಾದ ರಸ್ತೆಯಲ್ಲಿ ಕಾರುಗಳನ್ನು ತಿಂಗಳುಗಟ್ಟಲೆ ಒಂದೇ ಕಡೆ ನಿಲ್ಲಿಸಲಾಗಿದೆ ಎಂಬ ಸಾಕಷ್ಟು ದೂರುಗಳು ಬಂದಿವೆ. ಪೌರ ಕಾರ್ಮಿಕರಿಗೂ ಕಸ ಹೊಡೆಯಲು ತೊಂದರೆ ಆಗಿದೆ. ಇಂತಹ ಸಮಸ್ಯೆ ನಗರಸಭೆಯೇ ಪರಿಹರಿಸಬೇಕೆಂದರೆ ಹೇಗೆ. ನಾಗರಿಕರಿಗೆ ಕನಿಷ್ಟ ಪೌರ ಪ್ರಜ್ಞೆ ಇರಬೇಕು. ಕೆಳಗೋಟೆ, ಐಯ್ಯಣ್ಣನ ಪೇಟೆ ಸೇರಿ ಹಲವು ಕಡೆಗಳಿಂದ ಈ ಬಗೆಯ ವಾಹನ ಕಿರಿಕಿರಿ ದೂರು ಬಂದಿವೆ. ತೆರವುಗೊಳಿಸುವುದರ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು.

ರೇಣುಕ, ಪೌರಾಯುಕ್ತೆ, ನಗರಸಭೆ ಚಿತ್ರದುರ್ಗ