ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನೀಲಿಯಟ್‌ ಶ್ರೀ ಶಾಸ್ತವು ದೇವರ ಕೊಂಬಾಟ್‌ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನೀಲಿಯಟ್ ಶ್ರೀ ಶಾಸ್ತವು ದೇವರ ಕೊಂಬಾಟ್ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಈ ಉತ್ಸವದಲ್ಲಿ ಕೊಂಬಾಟ್, ಪೀಲಿಯಟ್, ಬಿಲ್ಲಾಟ್, ಕತ್ತಿಯಟ್, ತೇಲಾಟ್ ಸೇರಿದಂತೆ 18 ತರದ (ಆಟ್) ಪೂರ್ವ ಪದ್ಧತಿ ಕುಣಿತ ವಿಶೇಷವಾಗಿ ಆಕರ್ಷಣೆಯಾಗಿದೆ.ಪ್ರತಿ ವರ್ಷದಂತೆ ಈ ವರ್ಷವೂ ಮೊದಲು ನೀಲಿಯಟ್ ಶ್ರೀ ಶಾಸ್ತವು ದೇವರ ಸನ್ನಿಧಿಯಲ್ಲಿ ಗ್ರಾಮಸ್ಥರು ಎತ್ತು ಹೇರಟ ಹಾಗೂ ವಿಶೇಷ ಪ್ರಾರ್ಥನೆಯ ಸಲ್ಲಿಸಿದ ಬಳಿಕ ಸಮೀಪದ ಶ್ರೀ ಭಗವತಿ ದೇವಾಲಯಕ್ಕೆ ಬರಲಾಯಿತು. ನಂತರ ಸನ್ನಿಧಿಗೆ ಸಂಬಂಧಪಟ್ಟ ವ್ರತಧಾರಿ ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಕೆಂಪು ಮತ್ತು ಶ್ವೇತ ವಸ್ತ್ರಗಳನ್ನು, ಗೆಜ್ಜೆ ತೊಟ್ಟುಕೊಂಡು ದೇವಾಲಯದ ಪ್ರಾಂಗಣದಲ್ಲಿ ವೃತ್ತಾಕಾರವಾಗಿ ಪಡುವ ಎಂಬ ಚರ್ಮ ವಾದ್ಯಕ್ಕೆ ತಕ್ಕಂತೆ ಲಯಬದ್ಧವಾಗಿ ಹೆಜ್ಜೆ ಹಾಕುವುದು ಅತ್ಯಾಕರ್ಷಕವಾಗಿದ್ದು ನೆರೆದ ಭಕ್ತಾದಿಗಳು ವೀಕ್ಷಿಸಿ ತನ್ಮಯರಾದರು.

ಉತ್ಸವಕ್ಕೆ ಈ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮಸ್ಥರು 20 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆಯೊಂದಿಗೆ ಪೂರ್ವ ತಯಾರಿ ನಡೆಸಲಾಗುತ್ತದೆ. ಹಬ್ಬದ ದಿನ ನವಿಲು ಗರಿಗಳನ್ನು ಹಿಡಿದು ಕುಣಿಯುವ ಪೀಲಿಯಟ್, ಪ್ರಾಣಿಗಳ ಅಥವಾ ಮರದಿಂದ ಮಾಡಿದ ಕೊಂಬುಗಳನ್ನು ಹಿಡಿದುಕೊಂಡು ಕುಣಿಯುವ ಕೊಂಬಾಟ್ , ಬಿಲ್ಲು ಬಾಣಗಳನ್ನು ಹಿಡಿದು ಕುಣಿಯುವ ಬಿಲ್ಲಾಟ್, ಮರದಿಂದ ತಯಾರಿಸಿದ ಕತ್ತಿ ಹಿಡಿದು ಕುಣಿಯುವ ಕತ್ತಿಯಟ್ ಸೇರಿದಂತೆ18 ತರದ (ಆಟ್) ಕುಣಿತ ಹಬ್ಬದ ದಿನ ಬೆಳಿಗ್ಗೆ ಮತ್ತು ಸಂಜೆ ದೇವಾಲಯದ ಆವರಣದಲ್ಲಿ ನೆರವೇರಿತು.

ಈ ಸಂದರ್ಭ ದೇವಾಲಯದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಳಿಗೆ ಹರಕೆ ಕಾಣಿಕೆ ಒಪ್ಪಿಸಿ ಪೂಜೆಗಳನ್ನು ನೆರವೇರಿಸಿ ಪುನೀತ ಭಾವ ಹೊಂದಿದರು. ಹಬ್ಬದ ಪ್ರಯುಕ್ತ ವಿವಿಧ ಪೂಜಾ ವಿಧಿ ವಿಧಾನಗಳ ಬಳಿಕ ಮಂಗಳಾರತಿ, ಮಹಾಪೂಜೆ, ತೀರ್ಥ ಪ್ರಸಾದ, ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನದಾನವು ನೆರವೇರಿಸಲಾಯಿತು.

ಉತ್ಸವದಲ್ಲಿ ತಕ್ಕ ಮುಖ್ಯಸ್ಥರು ದೇವಾಲಯದ ಆಡಳಿತ ಪದಾಧಿಕಾರಿಗಳು ಹಾಗೂ ಊರ ಮತ್ತು ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.