ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ 81 ದೇಸೀ ಖಾದ್ಯಗಳ ಪರಿಮಳ

| Published : Dec 28 2024, 01:30 AM IST / Updated: Dec 28 2024, 07:34 AM IST

ಸಾರಾಂಶ

ಬೆಂಗಳೂರಿನ ಅರಮನೆ  ಮೈದಾನದಲ್ಲಿ ನಡೆದ ಹವ್ಯಕ ಕನ್ನಡ ಸಮ್ಮೇಳನದಲ್ಲಿ 81 ಬಗೆಯ ಖಾದ್ಯಗಳು ಗಮನ ಸೆಳೆದವು.

 ಬೆಂಗಳೂರು : 81 ಬಗೆಯ ಹವಿ ತಿನಿಸು-ಖಾದ್ಯಗಳು, ಸಿರಿಧಾನ್ಯಗಳ ಉತ್ಪನ್ನಗಳು, ಗೃಹಿಣಿಯರನ್ನು ಆಕರ್ಷಿಸುತ್ತಿರುವ ನೂರಾರು ಕರಕುಶಲ, ಪಾರಂಪರಿಕ ವಸ್ತುಗಳು, ಕಣ್ಮನ ಸೆಳೆಯುತ್ತಿರುವ ವಿಭಿನ್ನ ವಿನ್ಯಾಸದ ಆಭರಣಗಳು. ಅಷ್ಟೇ ಅಲ್ಲ, ಪ್ರತಿಯೊಬ್ಬರ ಗಮನ ಸೆಳೆಯುತ್ತಿರುವ ಆಲೆಮನೆ, ದೇಸೀ ಹಸುಗಳು, ಯಕ್ಷಗಾನ ಕಲಾಕೃತಿಗಳು.

ಇದು, ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಚಾಲನೆಗೊಂಡ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿನ ಪ್ರಮುಖ ಆಕರ್ಷಣೆಗಳು. ಹೌದು ಅಲ್ಲಿ ಅಕ್ಷರಶಃ ಹವ್ಯಕ ಸಂಸ್ಕೃತಿಯ ಮಹಾಸಂಗಮವೇ ಏರ್ಪಟ್ಟಿದೆ.

ಪಾಕೋತ್ಸವದ ರುಚಿ:

ಸಮ್ಮೇಳನದ ಪ್ರಮುಖ ಆಕರ್ಷಣೆ ಪಾಕೋತ್ಸವ. ಇಲ್ಲಿ ಹವ್ಯಕರ ಅಡುಗೆ ಮನೆಯಲ್ಲಿ ತಯಾರಾಗುವ 100ಕ್ಕೂ ಹೆಚ್ಚು ಬಗೆಯ ತಿನಿಸು, ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹವ್ಯಕರ ಮನೆಗಳಲ್ಲಿ ಮಾತ್ರ ಸಿಗುವ ತಿನಿಸುಗಳನ್ನು ಜನರು ಚಪ್ಪರಿಸಿ ತಿಂದರು. ಎರಿಯಪ್ಪ, ಅತ್ರಾಸ, ಗೆಣಸಲೆ, ದೊಡ್ಡಪತ್ರೆ, ಬಾಳೆಹಣ್ಣು ಪೋಡಿ, ನೀರು ದೋಸೆ, ಕಬ್ಬಿನ ಹಾಲಿನ ದೋಸೆ, ಅಕ್ಕಿರೊಟ್ಟಿ, ಒತ್ತು ಶ್ಯಾವಿಗೆ, ಗೋಳಿಬಜೆ, ನೀರುಳ್ಳಿ ಬಜೆ, ಶಂಕರ ಪೊಳೆ, ಮಾವು ಚಿತ್ರಾನ್ನ, ಹುಣಸೆ ಚಿತ್ರಾನ್ನ, ಕರ್ಜಿಕಾಯಿ, ಗೊಜ್ಜು ಅವಲಕ್ಕಿ, ಹಾಲುಬಾಯಿ, ಕಾಯಿ ಹೋಳಿಗೆ, ತೆಳ್ಳವು (ದೋಸೆ), ಮೊದಲಾದ ತಿನಿಸುಗಳು, ಹಲಸಿನ ಹಪ್ಪಳ, ಒಗ್ಗರಣೆ ಅವಲಕ್ಕಿ, ಅತಿರಸ, ಅಕ್ಕಿ ಕೇಸರಿ, ವಿವಿಧ ರೀತಿಯ ಉಪ್ಪಿನಕಾಯಿ ಸೇರಿದಂತೆ ಮೊದಲಾದ ತಿಂಡಿ, ಖಾದ್ಯಗಳನ್ನು ಸಮ್ಮೇಳನಕ್ಕೆ ಆಗಮಿಸಿದ ಜನರು ಸ್ಥಳದಲ್ಲೇ ಸ್ಯಾಂಪಲ್‌ ರುಚಿ ನೋಡುತ್ತಾ ತಮ್ಮಿಷ್ಟದ ತಿನಿಸು ಖರೀದಿ ಮಾಡಿದರು.

ಗಾಯತ್ರೀ ಥೀಮ್‌ ಪಾರ್ಕ್‌ ವಿರಾಠ್‌ ದರ್ಶನ

ಸಮ್ಮೇಳನದ ವೇದಿಕೆಯ ಹೊರಭಾಗದಲ್ಲಿ ಸ್ಥಾಪಿಸಿರುವ ಗಾಯತ್ರೀ ಥೀಮ್‌ ಪಾರ್ಕ್‌-ಮೂಲಮಂತ್ರದ ವಿರಾಠ್‌ ದರ್ಶನ, ವಿವಿಧ ದೇವತೆಗಳು, ಸಂತಶ್ರೇಷ್ಠರು, ಋಷಿಮುನಿಗಳ ಧ್ಯಾನಾಸಕ್ತ ಪುತ್ಥಳಿಗಳು, ಪ್ರತಿದಿನ ಲೋಕಕಲ್ಯಾಣಕ್ಕಾಗಿ ಹವ್ಯ-ಯಜ್ಞಗಳು ಗಮನ ಸೆಳೆಯುತ್ತಿವೆ. ಪ್ರತಿದಿನ ಬೆಳಗಿನಿಂದಲೇ ಸಾವಿರಾರು ಮಾತೆಯರಿಂದ ಭಕ್ತಿ ಭಜನೆ, ಸಹಸ್ರ ಕಂಠಗಳಿಂದ ಭಗವದ್ಗೀತೆ ಪಠಣ ಸೇರಿದಂತೆ ವಿವಿಧ ದೇವತಾಕಾರ್ಯಗಳನ್ನು ನಡೆಸಲಾಗುತ್ತಿದೆ. ಕೂಷ್ಮಾಂಡಹವನ, ರುದ್ರಹವನ, ನವಗ್ರಹಶಾಂತಿ, ಚಂಡಿಕಾಹೋಮ ಮೊದಲಾದ ೭೫ ಬಗೆಯ ಹೋಮಗಳನ್ನು ಮಾಡುವ ಹೋಮಕುಂಡಗಳು ಬಣ್ಣ ಬಣ್ಣದ ರಂಗೋಲಿ ಸಹಿತ ಪ್ರದರ್ಶನಗೊಂಡವು.

ಕರಕುಶಲ-ವಾಣಿಜ್ಯ ಮಳಿಗೆಗಳು:

ಸಮ್ಮೇಳನದ ನಡುವೆಯೇ ಹೊರಭಾಗದಲ್ಲಿರುವ 81 ವಾಣಿಜ್ಯ ಮಳಿಗೆಗಳು, 81 ದೇಶೀ ಕರಕುಶಲ ಹಾಗೂ ಆಭರಣ ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಜನರು ತಮ್ಮಿಷ್ಟದ ಖಾದಿ ಉಡುಪು, ಗೃಹಾಲಂಕಾರಿಕ ಕರಕುಶಲ ವಸ್ತುಗಳು, ಚಿನ್ನಾಭರಣ, ಸಾವಯವ ತಿಂಡಿ ತಿನಿಸು, ಆಹಾರೋತ್ಪನ್ನಗಳನ್ನು ಖರೀದಿಸಿದರು. ತೆಂಗಿನ ಹಾಳಿನ ಐಸ್‌ಕ್ರೀಂಅನ್ನು ಮಕ್ಕಳು, ಮಹಿಳೆಯರು ಮುಗಿಬಿದ್ದು ಸವಿದದ್ದು ಕಂಡುಬಂತು. ಮತ್ತೊಂದಡೆ ಹಳೆಯ ಕಾಲದ ಲಾಟೀನ್‌, ಮೊಸರು ಕಡೆಯುವ ಮಂತು, ಗಡಿಗೆ, ರೇಡಿಯೋ, ಟೆಲಿಫೋನ್‌, ಒನಕೆ, ಕಡುಬಾಡು ಸೇರಿದಂತೆ ನೂರಾರು ಪಾರಂಪರಿಕ ವಸ್ತುಗಳ ಪ್ರದರ್ಶನ ಆಕರ್ಷಣೀಯವಾಗಿತ್ತು.

ರಂಗೋಲೆ ಸ್ಪರ್ಧೆ

ಸಮ್ಮೇಳನಕ್ಕೆ ಆಗಮಿಸಿದ್ದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಲಾಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮಂದಿ ಭಾಗವಹಿಸಿ ಆಕರ್ಷಣೀಯ ರೀತಿಯಲ್ಲಿ ರಂಗೋಲಿಗಳನ್ನು ಬಿಡಿಸಿ ರಂಗೋಲಿ ಲೋಕವನ್ನೇ ಸೃಷ್ಟಿಸಿದ್ದರು. ತೀರ್ಪುಗಾರರು ಆಯ್ಕೆ ಮಾಡಿದ ರಂಗೋಲೆಗಳಿಗೆ ಬಹುಮಾನ ನೀಡಲಾಗುತ್ತದೆ.

ವ್ಯವಸ್ಥಿತ ತಿಂಡಿ-ಭೋಜನ ವ್ಯವಸ್ಥೆ

ಮೂರೂ ದಿನ ಸಮ್ಮೇಳನಕ್ಕೆ ಭೇಟಿ ನೀಡಿವ ಎಲ್ಲರಿಗೂ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವ್ಯವಸ್ಥಿತವಾಗಿ ಹವ್ಯಕರ ತಿಂಡಿ, ಭೋಜನದ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಕಾಯಿ ಹೋಳಿಗೆ, ಪಲಾವ್‌, ಅನ್ನ-ಕೆತ್ತಲಸಿನ ಕಾಯಿ ಸಾಂಬರ್‌, ಮಜ್ಜಿಗೆ ಹುಳಿ, ಹಲಸಿನ ಹಪ್ಪಳ, ಮಿಡಿಮಾವಿನ ಉಪ್ಪಿನಕಾಯಿ, ಅಪ್ಪೆಹುಳಿ, ಖರ್ಭೂಜ ಪಾಯಸ ಸೇರಿದಂತೆ ವಿವಿಧ ಭಕ್ಷ್ಯ ಭೋಜನ ಸವಿದರು.

ದೇಸೀ ಗೋವುಗಳಿಗೆ ತಿಂಡಿ

ಶ್ರೀರಾಮಚಂದ್ರಾಪುರ ಮಠದ ಗೋಶಾಲೆಯ ಹತ್ತಾರು ದೇಸೀ ತಳ ಗೋವುಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿದೆ. ಈ ಗೋವುಗಳಿಗೆ ತಿಂಡಿ ನೀಡಿ, ಸೆಲ್ಫಿ ತೆಗೆದುಕೊಂಡು ಮಕ್ಕಳು, ಸಾರ್ವಜನಿಕರು ಖುಷಿ ಪಟ್ಟರು. ಪಕ್ಕದಲ್ಲೇ ಆಲೆಮನೆಯಲ್ಲಿ ತೆಂಗಿನ ಗರಿಯ ಟೋಪಿ, ಕಟ್ಟಿ ಹಿಡಿದು ಗಾಣದ ಎಮ್ಮೆ ಮತ್ತು ಕೋಣಗಳನ್ನು ಓಡಿಸುವ ಮೂಲಕ ಮಕ್ಕಳು ಸಂತೋಷ ಪಟ್ಟರು.