ಅಪಘಾತವೆಂದು ಬಿಂಬಿಸಿದ್ದ ಕೊಲೆ ಆರೋಪಿಗಳ ಬಂಧನ

| Published : Jul 20 2024, 12:59 AM IST

ಸಾರಾಂಶ

ಜಮೀನು ವಿವಾದದ ಹಿನ್ನೆಲೆ ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಬೊಲೆರೋ ಗೂಡ್ಸ್‌ ವಾಹನದಿಂದ ಗುದ್ದಿಸಿ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿರುವ ಕಾಗವಾಡ ಠಾಣೆ ಪೊಲೀಸರು, ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಜಮೀನು ವಿವಾದದ ಹಿನ್ನೆಲೆ ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಬೊಲೆರೋ ಗೂಡ್ಸ್‌ ವಾಹನದಿಂದ ಗುದ್ದಿಸಿ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿರುವ ಕಾಗವಾಡ ಠಾಣೆ ಪೊಲೀಸರು, ಕೊಲೆ ಎಂಬುದು ತನಿಖೆ ವೇಳೆ ತಿಳಿದುಬಂದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸಂಬರಗಿಯ ಮಾಣಿಕ ಕೇಶವ ಕದಮ್ (52) ಹತ್ಯೆಗೀಡಾದವರು. ಅದೇ ಗ್ರಾಮದ ಲಕ್ಷ್ಮಣ ಸುಲ್ತಾನ ಸೊಡ್ಡಿ, ರಾಮ್ ಸುಲ್ತಾನ ಸೊಡ್ಡಿ, ಅನೀಲ ಗೋವಿಂದಕ್ಕೆ ಕಂಟೇಕರ, ಮಿರಜ್‌ಸಾಂಗ್ಲಿ ತಾಲೂಕಿನ ಕಥವ ಗ್ರಾಮದ ಸುಭಾಷ ಅಮಸಿದ್ದ ಶಿಂಗಾಡೆ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಭರಮಣ್ಣ ಸುಲ್ತಾನ ಸೊಡ್ಡಿ ತಲೆಮರೆಸಿಕೊಂಡಿದ್ದಾನೆ.

ಹತ್ಯೆಯಾದ ಮಾಣಿಕ ಕದಮ್ ಅವರು ತಮ್ಮ 6 ಎಕರೆ ಜಮೀನನ್ನು ಭರಮಣ್ಣ ಸೊಡ್ಡಿಗೆ ಮಾರಾಟ ಮಾಡಿದ್ದರು. ಆದರೆ, ಇನ್ನೂ ದಾಖಲೆಯಲ್ಲಿ ಹೆಸರು ಸೇರ್ಪಡೆ ಆಗಿರಲಿಲ್ಲ. ಈ ನಡುವೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ನಂತರ ಭೂವಿವಾದ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು. ಕೋರ್ಟ್‌ನಲ್ಲಿ ಜಮೀನು ನಮ್ಮ ಕೈಬಿಡುತ್ತದೆ ಎಂಬುದು ಗೊತ್ತಾಗಿ ಮಾಣಿಕ್ ಕದಮ್‌ ಅವರನ್ನು ಕೊಲೆ ಮಾಡಲು ಮೂವರು ಸಹೋದರರು ಸೇರಿ ಸಂಚು ರೂಪಿಸಿ ಜು.11ರಂದು ದ್ವಿಚಕ್ರ ವಾಹನ ಮೇಲೆ ಹೊರಟಿದ್ದ ಮಾಣಿಕ್‌ನಿಗೆ ಹಿಂದಿನಿಂದ ತಮ್ಮ ಪಿಕಪ್‌ ಗೂಡ್ಸ್‌ ವಾಹನ ಹಾಯಿಸಿ ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಿದ್ದರು.

ನಂತರ ಮೃತನ ಮಗ ಗಣೇಶ ಮಾಣಿಕ ಕದಮ್‌ ಕಾಗವಾಡ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ ಹತ್ಯೆ ಎಂಬುದು ಸಾಬೀತಾಗಿದೆ. ಡಿವೈಎಸ್.ಪಿ ಶ್ರೀಪಾದ ಜಲ್ದೆ ನೇತೃತ್ವದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಎಸ್‌ಐ ಶಿವಾನಂದ ಕಾರಜೊಳ ಒಳಗೊಂಡ ತಂಡ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.