ಯಕ್ಷಗಾನದ ಭಾವ ಅರಿತು ಕಲಾವಿದ ರಂಗ ಪ್ರಯೋಗ ನಡೆಸಬೇಕು. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಕಲಾವಿದರ ಜವಾಬ್ದಾರಿ.

ಕನ್ನಡಪ್ರಭ ವಾರ್ತೆ ಕುಮಟಾಕಲಾವಿದ ಶಾಶ್ವತನಲ್ಲ, ಆದರೆ ಕಲೆ ಶಾಶ್ವತ. ಯಕ್ಷಗಾನ ಸಮಾಜದ ಕಲೆ, ಅದನ್ನು ಉಳಿಸಬೇಕಾದ್ದೂ ಸಮಾಜವೇ. ಯಕ್ಷಗಾನದ ಭಾವ ಅರಿತು ಕಲಾವಿದ ರಂಗ ಪ್ರಯೋಗ ನಡೆಸಬೇಕು. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಕಲಾವಿದರ ಜವಾಬ್ದಾರಿ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಎಂ.ಆರ್. ನಾಯಕ ಹೇಳಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಹವ್ಯಕರು ಮತ್ತು ಯಕ್ಷಗಾನ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದ ಡಾ. ಶಂಕರ ಶಾಸ್ತ್ರಿ ಮಾತನಾಡಿ, ಇದು ನನಗೆ ಸಂದ ಗೌರವವಲ್ಲ. ಯಕ್ಷಗಾನಕ್ಕೆ ಸಂದ ಗೌರವ. ನನ್ನ ಸಾಧನೆಗೆ ಡಾ. ಜಿ.ಎಲ್. ಹೆಗಡೆ ಕಾರಣ ಎಂದರು. ಅತಿಥಿ ಡಾ. ಗೋಪಾಲಕೃಷ್ಣ ಶರ್ಮಾ ಮಾತನಾಡಿ, ಡಾ. ಜಿ.ಎಲ್. ಹೆಗಡೆ ಯಕ್ಷಗಾನಕ್ಕಾಗಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಜೀವನ, ಬರಹಗಳೇ ನಮ್ಮೆಲ್ಲರಿಗೆ ಪ್ರೇರಣೆ. ಇದೊಂದು ಸುವರ್ಣ ಕಾರ್ಯಕ್ರಮವಾಗಿದ್ದು, ಯಕ್ಷಗಾನ ಉಳಿಸಿಕೊಳ್ಳಲು ನಾವೆಲ್ಲಾ ಶ್ರಮಿಸಬೇಕು ಎಂದರು.ಸೌರಭ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಭಟ್ಟ, ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಡಾ. ಜಿ.ಎಲ್ ಹೆಗಡೆ ಮಾತನಾಡಿದರು.

ಕಾರ್ಯದರ್ಶಿ ವಸಂತ ಭಟ್ಟ ವಂದಿಸಿದರು. ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ನಿರೂಪಿಸಿದರು. ಬಳಿಕ ಜಲವಳ್ಳಿಯ ಕಲಾಧರ ಯಕ್ಷರಂಗ ಬಳಗದವರಿಂದ ಸುವರ್ಣ-ಸುಪರ್ಣ (ಪೌಂಡ್ರಕ ವಾಸುದೇವ) ಆಖ್ಯಾನ ಜನಮನ ಗೆದ್ದಿತು. ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ, ಚಂಡೆಯಲ್ಲಿ ರಾಮನ್ ಊರಕೇರಿ ಕಾರ್ಯನಿರ್ವಹಿಸಿದರು. ವಿದ್ಯಾಧರ ರಾವ್ ಜಲವಳ್ಳಿ, ಅಶೋಕ ಭಟ್ಟ ಸಿದ್ಧಾಪುರ, ಶ್ರೀಧರ ಭಟ್ಟ ಕಾಸರಕೋಡು, ನಾಗಶ್ರೀ ಗೀಜಗಾರು ವಿವಿಧ ಪಾತ್ರ ನಿರ್ವಹಿಸಿ ಮನಗೆದ್ದರು.