ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನಡೆದಿದ್ದು ರಣಜಿ ಪಂದ್ಯ. ಆದರೆ, ಕೇಳಿಸಿದ್ದು ಆರ್‌ಸಿಬಿ... ಆರ್‌ಸಿಬಿ ಘೋಷಣೆ.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಫೈನಲ್‌ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರಿಂದ ಕೇಳಿಬಂದ ಉದ್ಘೋಷ.

ಕರ್ನಾಟಕ ತಂಡದ ಆಟಗಾರರು ಎದುರಾಳಿ ತಂಡದ ವಿಕೆಟ್‌ ಪಡೆದಾಗ ಹಾಗೂ ಉತ್ತಮ ಫೀಲ್ಡಿಂಗ್‌ ಮಾಡಿದಾಗೆಲ್ಲ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿ ಆಟಗಾರರನ್ನು ಹುರುದುಂಬಿಸಿದರು. ಕೆ.ಎಲ್‌. ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ವಿರಾಟ್‌ ಕೊಹ್ಲಿ ಪರವಾಗಿಯೂ ಘೋಷಣೆ ಮೊಳಗಿದವು.


ಮಕ್ಕಳು ಹಾಜರು:

ಪಂದ್ಯದ ಎರಡನೇ ದಿನವಾದ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಹಾರ್ದಿಕ್‌ ಪಾಂಡ್ಯ, ಎಂ.ಎಸ್‌. ಧೋನಿ, ಯುವರಾಜ್‌ ಸಿಂಗ್‌, ವಿರಾಟ್‌ ಕೋಹ್ಲಿ ಸೇರಿದಂತೆ ತಮ್ಮ ನೆಚ್ಚಿನ ಕ್ರೀಡಾಪಟುಗಳ ಜರ್ಸಿ ಧರಿಸಿ ಸಂಭ್ರಮಿಸಿದರು.

ಶೇ. 80ರಷ್ಟು ಸೀಟ್‌ ಭರ್ತಿ:

ಮೊದಲ ದಿನ 4500 ಆಸನ ಭರ್ತಿಯಾಗಿದ್ದರೆ ಎರಡನೇ ಶೇ. 80ರಷ್ಟು ಆಸನ ಭರ್ತಿಯಾಗಿದ್ದವು. ₹ 200 ಮೊತ್ತದ ಟಿಕೆಟ್‌ ಶೇ. 90ರಷ್ಟು ಹಾಗೂ ₹ 100 ಮೊತ್ತದ ಟಿಕೆಟ್‌ ಶೇ. 60ರಷ್ಟು ಭರ್ತಿಯಾಗಿದ್ದವು. ಮಧ್ಯಾಹ್ನ 3.50ಕ್ಕೆ ಮಂದ ಬೆಳಕು ಹಾಗೂ ಮಳೆ ಬಂದ ಹಿನ್ನೆಲೆ ಪಂದ್ಯ ಸ್ಥಗಿತಗೊಳಿಸಿದ ಹಿನ್ನೆಲೆ ಪ್ರೇಕ್ಷಕರು ನಿರಾಶೆಯೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.

ಕೆಲವರು ಬೆಳಗ್ಗೆಯಿಂದಲೇ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರೆ, ಮಧ್ಯಾಹ್ನದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಅವರಿಗೆ ನಿರಾಸೆಯಾಯಿತು. ನಾವು ಬಹಳಷ್ಟು ನಿರೀಕ್ಷೆಯೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದೇವು. ಆದರೆ, ಟಿಕೆಟ್‌ ಖರೀದಿಸಿ ಒಂದೂವರೆ-ಎರಡು ಗಂಟೆಯಲ್ಲಿಯೇ ಮಳೆ ಬಂದು ಪಂದ್ಯ ಸ್ಥಗಿತಗೊಂಡಿದೆ ಎಂದು ಮೈಸೂರಿನಿಂದ ಆಗಮಿಸಿದ್ದ ಶ್ಯಾಮಲಾ ಭಟಕುರ್ಕಿ, ಅಮೋಘ ಸೇರಿದಂತೆ ಹಲವು ಬೇಸರ ವ್ಯಕ್ತಪಡಿಸಿದರು.

ಲೈವ್‌ ವಿಡಿಯೋ:

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವಿದ್ಯಾರ್ಥಿಗಳು ಬೌಂಡರಿಯತ್ತ ಬಾಲ್‌ ಬರುತ್ತಿದ್ದಂತೆ ಅದನ್ನು ತಡೆಯಲು ಬರುವ ಆಟಗಾರರೊಂದಿಗೆ ದೂರದಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಹೋಗಿ ಸ್ನೇಹಿತರಿಗೆ ಪಂದ್ಯ ತೋರಿಸಿದರು.

ಮೈದಾನಕ್ಕೆ ಓಡಿಬಂದ ಬಾಲಕಿ

ಮಳೆಯಿಂದ ರದ್ದಾದ ಬಳಿಕ ಮೈದಾನದಿಂದ ಪೆವಿಲಿಯನ್‌ನತ್ತ ಕರ್ನಾಟಕ ತಂಡದ ಆಟಗಾರರು ಬರುತ್ತಿದ್ದ ವೇಳೆ ಬಾಲಕಿಯೋರ್ವಳು ಕೆ.ಎಲ್‌. ರಾಹುಲ್‌ ಆಟೋಗ್ರಾಫ್‌ ಪಡೆಯಲು ಮೈದಾನದೊಳಗೆ ನುಗ್ಗಿದ್ದವು. ಈ ವೇಳೆ ಭದ್ರತಾ ಸಿಬ್ಬಂದಿ ಅವಳನ್ನು ತಡೆಯಲು ಯತ್ನಿಸಿದರು. ಇದನ್ನು ಗಮನಿಸಿದ ರಾಹುಲ್‌, ಭದ್ರತಾ ಸಿಬ್ಬಂದಿ ತಡೆದು ಬಾಲಕಿಗೆ ಆಟೋಗ್ರಾಫ್‌ ನೀಡಿದರು.