ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಲೇಖಕನಿಗೆ ಮಾತು ಎನ್ನುವುದು ಮಾಧ್ಯಮವಿದ್ದಂತೆ. ಪ್ರಾಮಾಣಿಕತೆ, ಬದ್ಧತೆ, ಪ್ರೀತಿಯಿಂದ ಮಾತುಗಳ ಮೇಲಿನ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಾಗ್ಮಿ, ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.ನಗರದ ವಿವೇಕಾನಂದ ರಂಗ ಮಂದಿರದಲ್ಲಿ ಭಾನುವಾರ ನಡೆದ ಎಂ.ಆರ್.ಎಂ.ಪ್ರಕಾಶನದ ಉದ್ಘಾಟನೆ, ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾಷೆಯ ಮೂಲಕ ಯಾರನ್ನು ಬೇಕಾದರೂ ಸುಲಭವಾಗಿ ಆಕರ್ಷಿಸಬಹುದು. ಭಾಷೆಗೆ ಅಂತಹದ್ದೊಂದು ಶಕ್ತಿ ಇದೆ. ನಮ್ಮ ನಡತೆ ಮತ್ತು ವ್ಯಕ್ತಿತ್ವದಿಂದ ಮಾತಿನ ಚಾಟಿ ಬೀಸಬೇಕು. ಮಾತನಾಡುವಾಗ ನಮ್ಮ ಜವಾಬ್ದಾರಿಗಳು, ಹೊಣೆಗಾರಿಕೆ ಹೆಚ್ಚಾಗುತ್ತಿರುತ್ತವೆ ಎನ್ನುವುದರ ಅರಿವಿರಬೇಕು. ಒಮ್ಮೆ ಮಾತನ್ನು ಕೆಡಿಸಿಕೊಂಡರೆ ಅದರ ಮೇಲಿನ ಹೊಣೆಗಾರಿಕೆಯನ್ನು ಮತ್ತೆ ಸಂಪಾದಿಸಿಕೊಳ್ಳುವುದು ತುಂಬಾ ಕಷ್ಟ ಎಂದರು.ಕತೆಗಾರನಾದವನು ಕತೆಯನ್ನು ಹೇಳುತ್ತಾ ಹೇಳುತ್ತಾ ಅದನ್ನು ಉಳಿಸಿಕೊಂಡು ಹೋಗುವ ಮನಸ್ಥಿತಿಯನ್ನೂ ಹೊಂದಿರಬೇಕು. ಕತೆ ಹೇಳುವಾಗ ಕೇಳುವವರ ಮನಃಪರಿವರ್ತನೆ ಮಾಡುವುದರ ಜೊತೆಯಲ್ಲೇ ನಿಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕು. ನಾಳೆಯೂ ಕತೆಯನ್ನು ಹೇಳುವ ಮನಸ್ಥಿತಿಯನ್ನು ಇಟ್ಟುಕೊಂಡಿರಬೇಕು. ಅದೇ ರೀತಿ ಕವಿಗಳು, ಸಾಹಿತಿಗಳೂ ಕೂಡ ಬರವಣಿಗೆಯನ್ನು ನಿರಂತರವಾಗಿ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನುಡಿದರು.
ಜನಸಾಮಾನ್ಯರ ಬದುಕು, ಅವರು ಎದುರಿಸುತ್ತಿರುವ ಸಂಕಷ್ಟಗಳು, ತಾನಿರುವ ಪ್ರದೇಶ, ಭಾಷೆ, ನಾಡು, ರಾಷ್ಟ್ರವನ್ನು ಕಟ್ಟಿಕೊಡುವುದು ಕವಿಗಳು, ಸಾಹಿತಿಗಳು, ಲೇಖಕರಾದವರ ಕರ್ತವ್ಯ. ಸಾಮಾನ್ಯ ಜನರಿಗೆ ಕೇಳಿಸದ, ಅವರ ಅರಿವಿಗೆ ಬಾರದ ಅನೇಕ ಸಂಗತಿಗಳು ನಿಮಗೆ ಗೊತ್ತಾಗಬೇಕು. ಅದನ್ನು ಸಾಹಿತ್ಯ ರೂಪದಲ್ಲಿ ಹೊರತಂದಾಗ ವಿಶೇಷವಾಗಿ ಓದುಗರನ್ನು ಆಕರ್ಷಿಸಲು ಸಾಧ್ಯ ಎಂದರು.ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಪುಸ್ತಕ ಸಂಸ್ಕೃತಿ ಇಂದು ಅಧೋಗತಿಗೆ ಇಳಿದಿದೆ. ಸರ್ಕಾರಗಳು ಪುಸ್ತಕ ಸಂಸ್ಕೃತಿಯ ಕತ್ತನ್ನು ಹಿಸುಕುತ್ತಿದ್ದಾರೆ. ಗ್ರಂಥಾಲಯಗಳು ಪುಸ್ತಕಗಳನ್ನು ಖರೀದಿ ಮಾಡುತ್ತಿಲ್ಲ. ಹಲವು ದಶಕಗಳ ಹಿಂದೆ ಖರೀದಿ ಮಾಡಿದ ಪುಸ್ತಕಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ವಿಷಾದಿಸಿದರು.
ಪುಸ್ತಕ ಸಂಸ್ಕೃತಿಯನ್ನು ಕೊಲ್ಲುವ ಮೂಲಕ ಸರ್ಕಾರಗಳು ಜನರು ಆಲೋಚನೆ ಮಾಡುವ, ಪ್ರಶ್ನಿಸುವ ಮನೋಭಾವವನ್ನು ದೂರ ಮಾಡುತ್ತಿದೆ. ಯಾರೂ ಕೂಡ ಮಾತನಾಡಲು ಸಾಧ್ಯವಾಗದಂತಹ ವಾತಾವರಣ ನಿಷ್ಕ್ರೀಯ ಸಮಾಜವನ್ನು ಸೃಷ್ಟಿ ಮಾಡುತ್ತಿದೆ. ಜಾಗತೀಕರಣಕ್ಕೆ ರೈತರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಕೆಲಸಗಳು ಹೆಚ್ಚಾಗಿ ನಡೆಯಬೇಕು. ರೈತರ ಆಶೋತ್ತರಗಳಿಗೆ ಸ್ಪಂದಿಸಿದರೆ ಸಾಹಿತ್ಯ ಉಳಿಯಲು ಸಾಧ್ಯವಾಗುತ್ತದೆ. ಸರ್ಕಾರಗಳೂ ಕೂಡ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಪ್ರತಿ ವರ್ಷ ೩೦೦ ಪುಸ್ತಕಗಳನ್ನು ಖರೀದಿಸುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಇ.ಚನ್ನಬಸವಣ್ಣ ಹಾಗೂ ಮದ್ದೂರು ತಾಲೂಕು ಮಾದರಹಳ್ಳಿಯ ಸಾವಯವ ಕೃಷಿಕ ಮಾದರಹಳ್ಳಿ ಈರೇಗೌಡ ಅವರ ಅಸಾಮಾನ್ಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿ ಅಭಿನಂದಿಸಲಾಯಿತು.
ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಅವರ ಒಗೆವ ಕಲ್ಲು ಶಿವಲಿಂಗ ಕವನಸಂಕಲನ, ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳೆಲೆ ಅವರ ಸಾಹಿತ್ಯ, ಚಾರಣ, ಶಿಕ್ಷಣದ ಕುರಿತಾದ ಲೇಖನಗಳ ಸಿದ್ಧಾಂತದಾಚೆಗೆ ಕೃತಿ ಹಾಗೂ ಚಂದ್ರಶೇಖರ ದ.ಕೋ.ಹಳ್ಳಿ ಅವರ ಅಂಕಣ ಬರಹ ಹಾಗೂ ವಿಶೇಷ ಲೇಖನಗಳನ್ನು ಒಳಗೊಂಡ ಮುಕ್ತ ಮತ್ತು ಸ್ವಾತಂತ್ರ್ಯ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.ದಿವ್ಯಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಎಂಆರ್‌ಎಂ ಪ್ರಕಾಶಕ ಮಂಜು ಮುತ್ತೇಗೆರೆ, ದ.ಕೋ.ಹಳ್ಳಿ ಚಂದ್ರಶೇಖರ ಇದ್ದರು.