ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಅತ್ಯಂತ ಅಪಾಯ: ಸಚಿವ ಮಹಾದೇವಪ್ಪ ಕಳವಳ

| Published : Jan 31 2024, 02:15 AM IST

ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಅತ್ಯಂತ ಅಪಾಯ: ಸಚಿವ ಮಹಾದೇವಪ್ಪ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ನಾಮಫಲಕ ಅನಾವರಣಗೊಳಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಚುನಾವಣೆ, ಒಬ್ಬರೇ ಅಧ್ಯಕ್ಷ ವ್ಯವಸ್ಥೆ ಜಾರಿಗೆ ತರುವುದು ಸರ್ವಾಧಿಕಾರಿ ವ್ಯವಸ್ಥೆಯಾಗಿದೆ. ಇದು ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುವ ಅಪಾಯಕಾರಿ ಕ್ರಮವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ವೆಂಕಟೇಶ್ವರ ಕಾಲೊನಿಯ ಬಾಬಾ ರಾಮದೇವ್ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಿಸಿರುವ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನದ ನಾಮಫಲಕವನ್ನು ಮಂಗಳವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

ಭಾರತ ಬಹುತ್ವದ ದೇಶವಾಗಿದ್ದು, ಇಲ್ಲಿ ಎಲ್ಲ ಜಾತಿ, ಧರ್ಮ, ಮತ, ಪಂಥ, ಆಚಾರ, ವಿಚಾರ ಇದೆ. ಆದ್ದರಿಂದಲೇ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ಎಂದರು.

ಸಿಂಧನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ 3 ವಸತಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 51 ರು. ಕೋಟಿ ಅನುದಾನ ಮಂಜೂರು ಮಾಡಿದೆ. 1600 ಕೋಟಿ ಅನುದಾನದಲ್ಲಿ ಸಿಂಧನೂರಿನಿಂದ ಕಲ್ಮಾಲವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸುದ್ದಿಗಾರರು ಶಾಸಕ ಹಂಪನಗೌಡ ಬಾದರ್ಲಿ ಅವರ ಗಮನ ಸೆಳೆದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಅಸಮ್ಮತಿ ಕುರಿತು ಕೇಳಿದ ಪ್ರಶ್ನೆಗೆ, ರಾಜ್ಯ ಸರ್ಕಾರ ಕೈಗಾರಿಕಾ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಕಾರ್ಯಕರ್ತರು ಸ್ವೀಕರಿಸಬೇಡಿ ಅಂತ ಹೇಳುತ್ತಿದ್ದಾರೆ. ಈ ಕುರಿತು ಸಿಎಂ, ಡಿಸಿಎಂ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ಮಹಿಳಾ ವಿಭಾಗದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ನಾಗವೇಣಿ ಪಾಟೀಲ್ ಇದ್ದರು.