ಮಂಟೇಸ್ವಾಮಿ ಪರಂಪರೆಯನ್ನು ಪ್ರಾಧಿಕಾರ ಮುಂದುವರೆಸಿ

| Published : May 11 2025, 01:17 AM IST

ಸಾರಾಂಶ

ಚಾಮರಾಜನಗರದಲ್ಲಿ ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಭಿವೃದ್ದಿ ಪ್ರಾಧಿಕಾರ ರಚನೆ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಮಂಟೇಸ್ವಾಮಿ ಪರಂಪರೆಯಲ್ಲಿನ ಸಾಂಪ್ರಾದಾಯಿಕ ಆಚರಣೆಗಳನ್ನು ಪ್ರಾಧಿಕಾರ ಮುಂದುವರೆಸಿಕೊಂಡು ಹೋಗಬೇಕು ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೊಪ್ಪೇಗೌಡನಪುರ, ಮಳವಳ್ಳಿಮಠದ ಸ್ವಾಮೀಜಿ ಸಚಿವ ಸಂಪುಟ ಸಭೆಯಲ್ಲಿ ಪ್ರಾಧಿಕಾರ ರಚನೆ ಅನಗತ್ಯ. ಇದು ಧಾರ್ಮಿಕ ಸ್ವಾಯತ್ತತೆ ಮೇಲಿನ ಹಸ್ತಕ್ಷೇಪ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಾಮಾಜಿಕ ಪರಂಪರೆ ಮೇಲಿನ ದಾಳಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಆಕ್ಷೇಪಾರ್ಹ, ಪ್ರಚೋದನಕಾರಿ ಹೇಳಿಕೆಯಾಗಿದೆ. ಸಂವಿಧಾನಬದ್ಧ ಚುನಾಯಿತ ಜನಪ್ರತಿನಿಧಿಗಳ ಸಚಿವ ಸಂಪುಟ ಜನ ಕಲ್ಯಾಣಕ್ಕೆ ಕೈಗೊಂಡ ಯೋಜನೆವೊಂದರ ಬಗ್ಗೆ ಜನರನ್ನು ಎತ್ತಿಕಟ್ಟುವ ಹೇಳಿಕೆ ನೀಡುವುದು ಸರಿಯಲ್ಲ. ಮಠಗಳ ಸ್ವಾಯತ್ತತೆ ಗೌರವಿಸುವುದು, ಕ್ಷೇತ್ರಗಳ ಅಭಿವೃದ್ದಿ ಸಂಬಂಧ ರೂಪುರೇಷೆ ತಯಾರಿಸುವ ಮುಂಚೆ ಮಠದವರ ಜತೆ ಚರ್ಚಿಸಬೇಕು, ಸರ್ಕಾರ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಲು ಅವರಿಗೆ ಮುಕ್ತ ಅವಕಾಶಗಳು ಇರುತ್ತವೆ. ಆ ಕೆಲಸ ಮಾಡಲು ಅವರಿಗೆ ಸ್ವತಂತ್ರರಾಗಿರುತ್ತಾರೆ ಎಂದರು.ಮಂಟೇಸ್ವಾಮಿ ಪರಂಪರೆಯಲ್ಲಿ ನಡೆಯುತ್ತಿದ್ದ ಸಾಂಪ್ರಾದಾಯಿಕ ಆಚರಣೆಗಳಿಗೆ ಪ್ರಾಧಿಕಾರದಿಂದ ಯಾವುದೇ ಧಕ್ಕೆಯಾಗಬಾರದು, ವೈದಿಕ ಪದ್ದತಿ, ಪುರೋಹಿತ ಶಾಹಿಗಳನ್ನು ತುರುಕುವ ಕೆಲಸ ಮಾಡಬಾರದು, ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರವ್ಯಾಪ್ತಿಯ ೭ ಗ್ರಾಮಗಳ ನಿರ್ಧಿಷ್ಟ ಜನ ಸಮುದಾಯದ ಸೇವೆಗಳನ್ನು ಪಡೆದು ಜಾತ್ರೆ ನಡೆಸಬೇಕು ಎಂದು ಆಗ್ರಹಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಸಂಶೋಧಕ ಮಹದೇವ ಶಂಕನಪುರ ಮಾತನಾಡಿ, ಮಂಟೇಸ್ವಾಮಿ ಕ್ಷೇತ್ರಗಳ ಜಾತ್ರೆಗಳು ಈವರೆಗೂ ಜನೋತ್ಸವಗಳಾಗಿದ್ದವು. ಪ್ರಾಧಿಕಾರದ ರಚನೆಯಾದಲ್ಲಿ ಅಧಿಕಾರಿಗಳು, ಪೋಲಿಸರು, ರಾಜಕಾರಣಿಗಳು ಹಿಡಿತ ಸಾಧಿಸುವ, ಜನರನ್ನು ಹತ್ತಿಕ್ಕುವ ಕೆಲಸ ಮಾಡಬಾರದು, ನೀಲಗಾರರು, ಮಂಟೇಸ್ವಾಮಿ, ಒಕ್ಕಲಿನವರು, ಸಂಸ್ಕೃತಿ ಸಂಶೋಧಕರು, ವಿದ್ವಾಂಸರ ಜತೆ ಚರ್ಚಿಸಿ, ಮಂಟೇಸ್ವಾಮಿ ಕ್ಷೇತ್ರ ಪ್ರಾಧಿಕಾರಕ್ಕೆ ಒಂದು ಸಾಂಸ್ಕೃತಿಕ ನೀತಿ ಸಂಹಿತೆ ರೂಪಿಸಬೇಕು, ಜಾತ್ರಾ ಸಂದರ್ಭದಲ್ಲಿ ಮಂಟೇಸ್ವಾಮಿ ಕಾವ್ಯಗಳ ಹಾಡುಗಾರಿಕೆ ನಡೆಯಬೇಕು, ಜನಪದ ತಂಡಗಳಿಗೆ ವೇದಿಕೆ ಕಲ್ಪಿಸಬೇಕು ಪ್ರಾಧಿಕಾರ ರಚನೆಯಾಗಿ ಸಾಂಪ್ರಾದಾಯಿಕ ಆಚರಣೆಗಳಿಗೆ ನಿರ್ಬಂಧ ಹೇರಿದರೆ ಮಂಟೇಸ್ವಾಮಿ ಪರಂಪರೆ ರಕ್ಷಣಾ ಸಮಿತಿ ಹೋರಾಟ ರೂಪಿಸಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಲ್.ಶಂಭುಲಿಂಗಸ್ವಾಮಿ, ಸದಸ್ಯ ಬಾಳಗುಣಸೆ ಮಂಜುನಾಥ್ ಹಾಜರಿದ್ದರು.