ಚಳ್ಳಕೆರೆ ನಗರದ ಬಾಪೂಜಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಜಿಯವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸ್ತುತ ಇಂದಿನ ಆಧುನಿಕ ಮಾದರಿಯ ಚಿಕಿತ್ಸಾ ಕ್ರಮಗಳು ಜಾರಿಗೆ ಬಂದಿದ್ದರೂ ರೋಗಿಗಳು ಇಷ್ಟ ಪಡುವ ಚಿಕಿತ್ಸೆ ಎಂದರೆ ಆಯುರ್ವೇದ. ಕಾರಣ, ಒಮ್ಮೆ ಆಯುರ್ವೇದ ಚಿಕಿತ್ಸೆಗೆ ಒಳಗಾಗಿ ಗುಣಮುಖರಾದರೆ ಮತ್ತೆ ಆ ರೋಗ ನಮ್ಮತ್ತ ಬರುವುದಿಲ್ಲ. ಆದರೆ, ಇತ್ತೀಚಿನ ಕೆಲ ಚಿಕಿತ್ಸೆಗಳು ಹೆಚ್ಚಿನ ಪ್ರಮಾಣದಲ್ಲಿ ಸಫಲವಾಗುತ್ತಿಲ್ಲ. ಆದ್ದರಿಂದ ಆಯುರ್ವೇದ ಮೇಲೆ ಜನರಿಗೆ ಇರುವ ನಂಬಿಕೆ ಅಪಾರ. ಇದು ದೈವದ ಕೊಡುಗೆ ಎಂದು ಎಲ್ಲರ ಭಾವನೆ. ಇಂತಹ ಚಿಕಿತ್ಸೆ ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ಹಾಸುಹೊಕ್ಕಾಗಿದೆ ಎಂದು ಬೆಂಗಳೂರಿನ ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ತಿಳಿಸಿದರು.ನಗರದ ಬಾಪೂಜಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಯುರ್ವೇದ ಇಂದು ಎಲ್ಲೆಡೆ ತನ್ನದೇಯಾದ ಗುಣಾತ್ಮಕ ಚಿಕಿತ್ಸೆ ಮೂಲಕ ಉತ್ತಮ ಪರಿಣಾಮವನ್ನು ಬೀರುತ್ತದೆ. ಚಿಕಿತ್ಸೆಯ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆಯುರ್ವೇದ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಲ್ಲಿರುವ ಅಪಾರವಾದ ಗಾಡನಂಬಿಕೆ, ವಿಶ್ವಾಸ ಆಯುರ್ವೇದ ಚಿಕಿತ್ಸೆಯ ಬಲವನ್ನು ಹೆಚ್ಚಿಸಿದೆ. ಆರೋಗ್ಯ ವಿಧಾನದಲ್ಲಿ ಯಾವುದೇ ಸುಧಾರಣೆ, ಚಿಕಿತ್ಸಾ ಮಾದರಿ ಬದಲಾದರೂ ಸಹ ಆಯುರ್ವೇದ ಚಿಕಿತ್ಸೆಯ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. ಆಯುರ್ವೇದ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಗುರಿ ಮುಟ್ಟುವನಿಟ್ಟಿನಲ್ಲಿ ಹೆಚ್ಚು ಪರಿಶ್ರಮ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಾಪೂಜಿ ಆಯುರ್ವೇದಿಕ್ ಕಾಲೇಜು ಪ್ರಾಂಶುಪಾಲ ಡಾ.ಬಸವರಾಜು, ಆಯುರ್ವೇದ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯಲ್ಲಿ ಇನ್ನೂ ಹೆಚ್ಚು ಆಸಕ್ತಿಯನ್ನು ಹೊಂದಲು ಇಂದಿನ ಈ ಉಪನ್ಯಾಸ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಲಿದೆ. ವಿಶೇಷವಾಗಿ ಕಾರ್ಯಕ್ರಮದ ಉಪನ್ಯಾಸ ನೀಡಿರುವ ಮಾತಾಜಿಯವರು ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ತಮ್ಮದೇಯಾದ ಉಪನ್ಯಾಸದ ಮೂಲಕ ಆಯುರ್ವೇದ ಚಿಕಿತ್ಸಾ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಇಂದಿನ ಅವರ ಉಪನ್ಯಾಸದಲ್ಲೂ ಹಲವಾರು ಹೊಸ ವಿಷಯಗಳನ್ನು ನಿಮ್ಮ ಮುಂದಿಟ್ಟಿದ್ದಾರೆ. ಆಯುರ್ವೇದ ಚಿಕಿತ್ಸೆ ಸುಧೀರ್ಘಕಾಲದ ಇತಿಹಾಸ ವನ್ನು ಹೊಂದಿದೆ ಎಂದರು.ಕಾರ್ಯಕ್ರಮದಲ್ಲಿ ಮಾತಾಜಿ ತ್ಯಾಗಮಯಿ, ವಂದನಾಮಯಿ, ಅಮೋಘಮಯಿ, ಮೋಕ್ಷಪ್ರಾಣಾ, ಉಪನ್ಯಾಸಕರಾದ ಡಾ.ಸುನೀಲ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.