ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಇತಿಹಾಸ ಪ್ರಸಿದ್ಧ ಕೇರಳದ ಕಾಸರಗೋಡಿನ ಅನಂತಪುರ ಶ್ರೀಅನಂತಪದ್ಮನಾಭ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಈಗ ಬಬಿಯಾ ಪ್ರತಿರೂಪವೇ ಎಂಬಂತೆ ಶನಿವಾರ ಸರೋವರದಲ್ಲಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಈ ಮೂಲಕ ಕ್ಷೇತ್ರದ ಸಾನ್ನಿಧ್ಯವನ್ನು ಎತ್ತಿಹಿಡಿದಿದೆ ಎಂದು ಭಕ್ತರು ನಂಬಿದ್ದಾರೆ.ಒಂದು ವಾರದ ಹಿಂದೆ ಭಕ್ತರೊಬ್ಬರು ಕ್ಷೇತ್ರದ ಸರೋವರದಲ್ಲಿ ಮೊಸಳೆ ಕಂಡ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಸಾಕ್ಷ್ಯಾಧಾರ ಇಲ್ಲದಿದ್ದರಿಂದ ನಂಬಲು ಅಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ. ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರುವ ಮರಿ ಮೊಸಳೆ ಶನಿವಾರ ಸಂಜೆ ವೇಳೆಗೆ ಕಾಣಿಸಿದ್ದು, ಭಕ್ತರಲ್ಲಿ ಖುಷಿ ತಂದಿದೆ. ದೇವರ ಪವಾಡವೋ, ಕಾರಣಿಕ ಶಕ್ತಿಯೋ ಎಂಬಂತೆ ಕ್ಷೇತ್ರದ ಕೆರೆಯಲ್ಲಿ ಮರಿ ಮೊಸಳೆ ಪತ್ತೆಯಾಗಿದ್ದು ಕ್ಷೇತ್ರಕ್ಕೆ ಮತ್ತಷ್ಟು ಆಸ್ತಿಕರನ್ನು ಆಹ್ವಾನಿಸುವಂತೆ ಮಾಡಿದೆ. ಈ ಮೊಸಳೆ ಜನರ ಸದ್ದು ಕೇಳಿದರೆ, ಕೂಡಲೇ ಸರೋವರದ ಪೊಟರೆಯೊಳಗೆ ಹೋಗುತ್ತದೆ.
ಈ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಇದ್ದ ಬಬಿಯಾ ಮೊಸಳೆ ಕಳೆದ ವರ್ಷ ಅ.9ರಂದು ಇಹಲೋಕ ತ್ಯಜಿಸಿತ್ತು. ಅದರ ಸ್ಮರಣಾರ್ಥ ಪ್ರತಿಮೆ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ಬೆಳವಣಿಗೆಗಳ ನಡುವೆಯೇ ಈಗ ಬಬಿಯಾ ಪ್ರತಿರೂಪದ ಇನ್ನೊಂದು ಮೊಸಳೆ ಸರೋವರಲ್ಲಿ ಪ್ರತ್ಯಕ್ಷವಾಗುವ ಮೂಲಕ ಭಕ್ತರನ್ನು ಚಕಿತಗೊಳಿಸಿದೆ.ಈ ಮೊಸಳೆಗೆ ನಾಮಕರಣ ಮಾಡುವ ಬಗ್ಗೆ ಕ್ಷೇತ್ರದ ತಂತ್ರಿಗಳು, ಪುರೋಹಿತರು ಹಾಗೂ ಆಡಳಿತ ಮಂಡಳಿ, ಭಕ್ತರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಮಾಹಿತಿ ತಿಳಿಸಿದೆ.ಏನಿದು ಸರೋವರ ಮೊಸಳೆ ವಿಶೇಷ?
ಅನಂತಪುರ ಕ್ಷೇತ್ರಕ್ಕೂ ಸರೋವರದಲ್ಲಿ ಇರುವ ಮೊಸಳೆಯೂ ವಿಶೇಷ ನಂಟು. ಈ ಸರೋವರಲ್ಲಿ ಇರುವ ಮೊಸಳೆ ನಿರುಪದ್ರವಿಯಾಗಿದೆ. ಪ್ರತಿದಿನ ಮಧ್ಯಾಹ್ನ ಶ್ರೀಅನಂತಪದ್ಮನಾಭನ ಮಹಾಪೂಜೆ ಬಳಿಕ ಪುರೋಹಿತರು ಮೊಸಳೆಗೆ ನೈವೇದ್ಯ ಅನ್ನ ಅರ್ಪಿಸುತ್ತಾರೆ. ಇದು ಮಾಮೂಲು ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಆದರೆ ಕಳೆದ ವರ್ಷ ಬಬಿಯಾ ಹೆಸರಿನ ಮೊಸಳೆ ವಯೋಸಹಜವಾಗಿ ಮೃತಪಟ್ಟ ಬಳಿಕ ಒಂದು ವರ್ಷದಿಂದ ಬೇರೆ ಮೊಸಳೆ ಇಲ್ಲದೆ ಸರೋವರ ಅನಾಥವಾದಂತೆ ಆಗಿತ್ತು. ನಾನಾ ಕಡೆಗಳಿಂದ ಭಕ್ತರು, ಪ್ರವಾಸಿಗರು ಮೊಸಳೆ ನೋಡಲೆಂದೇ ಇಲ್ಲಿಗೆ ಆಗಮಿಸುತ್ತಾರೆ. ಮಧ್ಯೆ ದೇವಸ್ಥಾನ ಇದ್ದು, ದೇವಸ್ಥಾನದ ಸುತ್ತ ಸರೋವರ ಆವೃತ್ತವಾಗಿದೆ. ಈ ಸರೋವರದಲ್ಲಿ ನೀರು ಎಂದೂ ಬತ್ತುವುದಿಲ್ಲ ಎನ್ನುವ ಪ್ರತೀತಿ ಇದೆ.ಈಗ ಕ್ಷೇತ್ರದ ಸರೋವರದಲ್ಲಿ ಕಾಣಿಸಿದ ಮರಿ ಮೊಸಳೆ ಮೂರನೇ ಮೊಸಳೆ. ಇದಕ್ಕೂ ಮೊದಲು ಬಬಿಯಾ ಮೊಸಳೆಗೂ ಮುನ್ನವೇ ಇದ್ದ ಮೊಸಳೆಯನ್ನು ಬ್ರಿಟಿಷರು ಗುಂಡಿಟ್ಟು ಕೊಂದಿದ್ದರು. ಬಳಿಕ ಪ್ರತ್ಯಕ್ಷವಾದ ಬಬಿಯ ಮೊಸಳೆ 75 ವರ್ಷ ಕಾಲ ನಿರುಪದ್ರವಿಯಾಗಿ ಬದುಕಿತ್ತು. ಈಗ ಬಬಿಯಾ ಮೃತಪಟ್ಟ ಒಂದು ವರ್ಷದಲ್ಲೇ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
----------