ಭಾತೃತ್ವ ಬೆಸೆಯುವುದು ಸಂವಿಧಾನದ ಮೂಲ ಆಶಯ

| Published : Jan 27 2025, 12:48 AM IST

ಸಾರಾಂಶ

ಪ್ರಪಂಚದ ಅತೀ ದೊಡ್ಡ ಸಂವಿಧಾನವಾಗಿ, ದೇಶದ ನೂರಾರು ಕೋಟಿ ಜನಸಂಖ್ಯೆ,ಶಿಸ್ತು ಬದ್ಧ ಜೀವನ ಹಾಗೂ ಕಾನೂನು ಪರಿಪಾಲನೆಗೆ ಬದ್ಧರನ್ನಾಗಿಸಿ, ಹಕ್ಕು ಮತ್ತು ಕರ್ತವ್ಯ ಸಹ ತಿಳಿಸುವ ಸುಸಜ್ಜಿತ ಸಂವಿಧಾನ ರಚನಾಕಾರ ಡಾ.ಬಿ.ಆರ್. ಅಂಬೇಡ್ಕರ ಹಾಗೂ ಇದಕ್ಕೆ ಶ್ರಮಿಸಿದ ಎಲ್ಲ ನಾಯಕರನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸುವೆ

ಮುಂಡರಗಿ: ನೂರಾರು ಭಾಷೆ,ಸಾವಿರಾರು ಜಾತಿ, ಹತ್ತು ಹಲವಾರು ಮತ-ಧರ್ಮಗಳಿಂದ ಕೂಡಿರುವ ನಮ್ಮ ದೇಶದಲ್ಲಿ ಎಲ್ಲಿ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ಖಾತ್ರಿಪಡಿಸಿ ಎಲ್ಲರ ನಡುವೆ ಭಾತೃತ್ವ ಬೆಸೆಯುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದು ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಅವರು ಭಾನುವಾರ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಜರುಗಿದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪ್ರಪಂಚದ ಅತೀ ದೊಡ್ಡ ಸಂವಿಧಾನವಾಗಿ, ದೇಶದ ನೂರಾರು ಕೋಟಿ ಜನಸಂಖ್ಯೆ,ಶಿಸ್ತು ಬದ್ಧ ಜೀವನ ಹಾಗೂ ಕಾನೂನು ಪರಿಪಾಲನೆಗೆ ಬದ್ಧರನ್ನಾಗಿಸಿ, ಹಕ್ಕು ಮತ್ತು ಕರ್ತವ್ಯ ಸಹ ತಿಳಿಸುವ ಸುಸಜ್ಜಿತ ಸಂವಿಧಾನ ರಚನಾಕಾರ ಡಾ.ಬಿ.ಆರ್. ಅಂಬೇಡ್ಕರ ಹಾಗೂ ಇದಕ್ಕೆ ಶ್ರಮಿಸಿದ ಎಲ್ಲ ನಾಯಕರನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸುವೆ ಎಂದರು.

ನಾವು ಈ ದಿನ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ,ಬಲಿದಾನ ಮಾಡಿದ ಮಹಾನ್ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು. ರಾಷ್ಟ್ರವನ್ನು ಪ್ರಗತಿಯ ಹಾದಿಯಲ್ಲಿ ಕರೆದೊಯ್ಯುವಲ್ಲಿ ಶ್ರಮಿಸುತ್ತಿರುವ ರೈತರು, ಶಿಕ್ಷಕರು, ವಿಜ್ಞಾನಿಗಳು ಮತ್ತ ಕಾರ್ಮಿಕರು ಹಾಗೂ ರಾಷ್ಟ್ರದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ಪಡೆಯ ಸೈನಿಕರನ್ನು ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿಯನ್ನು ಸ್ಮರಿಸಲೇ ಬೇಕು. ಆಗ ಈ ಸಂಭ್ರಮಾಚರಣೆಗಳಿಗೆ ಗೌರವಿಸಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ತುಂಗಭದ್ರಾ ನದಿಯಲ್ಲಿ ಬಿದ್ದವರನ್ನು ರಕ್ಷಣೆ ಮಾಡಿ ಜೀವಹಾನಿ ತಪ್ಪಿಸಿದ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಕಿಳ್ಳೀಕ್ಯಾತರ ಸಮುದಾಯದ 5 ಜನ ಯುವಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಪ್ರಹ್ಲಾದ ಹೊಸಮನಿ, ಕವಿಕಾ ಉಳ್ಳಾಗಡ್ಡಿ, ತಿಮ್ಮಪ್ಪ ದಂಡಿನ, ರಾಜಾಭಕ್ಷಿ ಬೆಟಗೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸೂಗಲ್, ಬಿಇಓ ಎಚ್.ಎಂ. ಫಡ್ನೇಶಿ, ಮಹಾದೇವ್ ಇಸರನಾಳ, ಮಂಜುನಾಥ ಮೇಗಳಮನಿ, ಸುನಿತಾ, ಕಲ್ಮಠ, ಸವಿತಾ ಸಾಸ್ವಿಹಳ್ಳಿ, ಸುವರ್ಣಾ ಕೋಟಿ, ಅರುಣಾ ಸೋರಗಾಂವಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗಂಗಾಧರ ಅಣ್ಣೀಗೇರಿ ಸ್ವಾಗತಿಸಿ, ಹನಮರಡ್ಡಿ ಇಟಗಿ ನಿರೂಪಿಸಿದರು.