ಸಮಾಜ ಸೇವೆಯೇ ರೋಟರಿಯ ಮೂಲ ಉದ್ದೇಶ

| Published : Mar 18 2024, 01:59 AM IST

ಸಾರಾಂಶ

53 ವರ್ಷಗಳ ಇತಿಹಾಸವಿರುವ ರೋಟರಿ ರಾಮನಗರ ಸಂಸ್ಥೆಯಲ್ಲಿ ಯುವಜನತೆಗೆ ಅವಕಾಶ ನೀಡುವ ಬಗ್ಗೆ ಕ್ಲಬ್ ನಲ್ಲಿ ಚರ್ಚಿಸಿ, ಹೊಸ ಸದಸ್ಯರ ಸೇರ್ಪಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಾಲಕ ರೊ.ಉದಯ್ ಕುಮಾರ್ ಕೆ. ಭಾಸ್ಕರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

53 ವರ್ಷಗಳ ಇತಿಹಾಸವಿರುವ ರೋಟರಿ ರಾಮನಗರ ಸಂಸ್ಥೆಯಲ್ಲಿ ಯುವಜನತೆಗೆ ಅವಕಾಶ ನೀಡುವ ಬಗ್ಗೆ ಕ್ಲಬ್ ನಲ್ಲಿ ಚರ್ಚಿಸಿ, ಹೊಸ ಸದಸ್ಯರ ಸೇರ್ಪಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಾಲಕ ರೊ.ಉದಯ್ ಕುಮಾರ್ ಕೆ. ಭಾಸ್ಕರ ಸಲಹೆ ನೀಡಿದರು.

ರೋಟರಿ ರಾಮನಗರ ಕ್ಲಬ್ ನ‌ 2023-24ನೇ ಸಾಲಿನ ಕಾರ್ಯ ವೈಖರಿ‌ ಪರಿಶೀಲಿಸಿ ಮಾತನಾಡಿದ ಅವರು, ಸಮಾಜ ಸೇವೆಯೇ ರೋಟರಿಯ ಮೂಲ ಉದ್ದೇಶ ಮತ್ತು ಮುಖ್ಯಗುರಿ ಎಂದು ಹೇಳಿದರು.

ರೊ.ಸಿದ್ದಪ್ಪಾಜಿ ಮಾತನಾಡಿ, ಸಂಸ್ಥೆ ಪರಿಸರ, ಆರೋಗ್ಯ, ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ, ಬಸ್ಸು ನಿಲ್ದಾಣದಂತಹ ಸಮಾಜ ಮುಖಿ ಕಾರ್ಯಗಳ ಮೂಲಕ ಕೊಡುಗೆ ನೀಡಿದ ಕೀರ್ತಿ ರೋಟರಿ ರಾಮನಗರಕ್ಕಿದೆ ಎಂದರು.

ಸಾಹಸಿ ಜ್ಯೋತಿರಾಜ್ (ಕೋತಿರಾಜು), ನಾನು ರಸ್ತೆ ಬದಿಯ ಅನಾಥ ಮಕ್ಕಳ ರಕ್ಷಣೆ, ಪಾಲನೆಗೆ ಪ್ರವಾಸಿಗರು ನನಗೆ ನೀಡುವ ನೆರವಿನಲ್ಲಿ ಅವರಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ. ನಾನು ಬೆಳಸಿದ ಕೆಲವರಿಗೆ ಉದ್ಯೋಗ ಸಿಕ್ಕಿದೆ. ಒಂದು ಹೆಣ್ಣು ಮಗುವಿಗೆ ವಿವಾಹ ಮಾಡುತ್ತಿದ್ದೇನೆ ಎಂದು ಹೇಳಿದರು.

ನಾನು ತಮಿಳುನಾಡಿನಲ್ಲಿ ಹುಟ್ಟಿದರೂ ಕರ್ನಾಟಕದಲ್ಲಿ ಬದುಕುವ ಆಸೆಯಿಂದ ಇಲ್ಲೆ ನೆಲೆ ಕಂಡುಕೊಂಡಿದ್ದೇನೆ. ಸೇಪ್ಟಿ ಹಾಕಿಕೊಂಡು ರಾಮನಗರದ ಹಂದಿಗುಂದಿ ಬೆಟ್ಟ ಹತ್ತುವ ಆಸೆಯಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಆ ಸಮಯದಲ್ಲಿ ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.

ಚೇರ್ಮನ್ ಗೌರ್ನರ್ ರೊ.ಆರ್.ಜಿ.ಚಂದ್ರಶೇಖರ್ ಜಿಲ್ಲಾ ಪಾಲಕರ ಪರಿಚಯವನ್ನು‌ ಓದಿದರು. ಕಾರ್ಯದರ್ಶಿ ರೊ. ಡಾ.ಷಾಜಿಯಾ ಅಲ್ತಾಪ್ ವಾರ್ಷಿಕ ವರದಿ ಮಂಡಿಸಿದರು. ಜ್ಯೋತಿರಾಜು ಮತ್ತು ಅಮೃತವಿಕಲ ಚೇತನ ವೃದ್ಧಾಶ್ರಮದ ರಮೇಶ್ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ನಾಗೇಶ್, ನಾಗರಾಜು ರೋಟರಿ ಕುಟುಂಬ ‌ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ರೊ.ದೀಪಕ್ ಶ್ರೀನಿವಾಸ್, ಈ ವರ್ಷದ ರಾಜ್ಯಪಾಲಕ ರೊ.ಗೋಪಾಲ್, ಸಹಾಯಕ ರಾಜ್ಯಪಾಲಕ ರವಿಕುಮಾರ್, ರೋಟರಿ ರಾಮನಗರ ಅಧ್ಯಕ್ಷ ರೊ.ಕಾಂತರಾಜು ಕೆ.ಎಸ್, ಕಾರ್ಯದರ್ಶಿ ರೊ.ಎ.ಎಸ್. ಜಯಕುಮಾರ್ ಉಪಸ್ಥಿತರಿದ್ದರು.