ಸಾರಾಂಶ
ನಿಷೇಧಿತ ರಾಸಾಯನಿಕ ಹಾಗೂ ಪಿಓಪಿ ಬಳಕೆ ಮಾಡಿ ನಿರ್ಮಿಸಲಾದ ಗಣೇಶ ಮೂರ್ತಿಗಳನ್ನು ಸಂಗ್ರಹಿಸಲಾಗಿದ್ದ ಗೋದಾಮುಗಳಿಗೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ್ದಾರೆ.
ಬೆಂಗಳೂರು: ನಗರದ ಹೆಮ್ಮಿಗೆಪುರ ವ್ಯಾಪ್ತಿಯ ಚೆಟ್ಟುಪಾಳ್ಯ ಮತ್ತು ಕೋಡಿಪಾಳ್ಯದಲ್ಲಿ ನಿಷೇಧಿತ ರಾಸಾಯನಿಕ ಹಾಗೂ ಪಿಓಪಿ ಬಳಕೆ ಮಾಡಿ ನಿರ್ಮಿಸಲಾದ ಗಣೇಶ ಮೂರ್ತಿಗಳನ್ನು ಸಂಗ್ರಹಿಸಲಾಗಿದ್ದ ಗೋದಾಮುಗಳಿಗೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೀಡಿದ ದೂರಿನ ಅನ್ವಯ ಬಿಬಿಎಂಪಿ ಅಧಿಕಾರಿಗಳು ಚೆಟ್ಟುಪಾಳ್ಯ ಮತ್ತು ಕೋಡಿಪಾಳ್ಯದ ಪ್ರತ್ಯೇಕ ಎರಡು ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಗಣೇಶ ಹಬ್ಬಕ್ಕೆ ಮಾರಾಟ ಮಾಡುವುದಕ್ಕೆ ತಯಾರಿಸಲಾದ ಸುಮಾರು 100ಕ್ಕೂ ಅಧಿಕ ಹಾಗೂ 3 ರಿಂದ 4 ಅಡಿ ಎತ್ತರದ ವಿಗ್ರಹಗಳನ್ನು ಪಿಒಪಿ ಮತ್ತು ರಾಸಾಯನಿಕ ಬಳಕೆ ಮಾಡಿ ತಯಾರಿಸಿಟ್ಟಿದ್ದರು. ಎರಡೂ ಗೋದಾಮಿಗಳನ್ನು ಸೀಜ್ ಮಾಡಲಾಗಿದೆ ಎಂದು ಆರ್.ಆರ್. ನಗರ ವಲಯದ ಆರೋಗ್ಯಾಧಿಕಾರಿ ಡಾ. ಸಂಗಮಿತ್ರ ಮಾಹಿತಿ ನೀಡಿದ್ದಾರೆ.