ಸಾರಾಂಶ
ಕಸ ಎತ್ತುವವರ ಬದುಕು ಕಷ್ಟದಾಯಕವಾಗಿದೆ. ವಿದೇಶದಲ್ಲಿ ಈ ಕೆಲಸವನ್ನು ಅಪಾಯಕಾರಿ ಕೆಲಸ ಮಾಡುವ ಪಟ್ಟಿಯಲ್ಲಿ ಸೇರಿಸಿ ಅತಿ ಹೆಚ್ಚು ಸಂಬಳ ಕೊಡುತ್ತಾರೆ. ಆದರೆ, ಭಾರತದಲ್ಲಿ ಈ ವ್ಯವಸ್ಥೆ ಇಲ್ಲ.
ಹುಬ್ಬಳ್ಳಿ:
ಪೌರಕಾರ್ಮಿಕರು ನಿತ್ಯ ಕಸ ಗುಡಿಸುವುದರಿಂದಾಗಿಯೇ ನಗರವು ಸುಂದರವಾಗಿ ಕಾಣುತ್ತಿದ್ದು ಇವರನ್ನು ಗೌರವಿಸುವ ಕಾರ್ಯವಾಗಲಿ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.ಇಲ್ಲಿನ ಅಶೋಕನಗರದಲ್ಲಿರುವ ಡಾ. ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಹು-ಧಾ ಮಹಾನಗರ ಪಾಲಿಕೆ ವತಿಯಿಂದ ನಡೆದ ಸ್ವಚ್ಛತೆಯೇ ಸೇವೆ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಘಟಕ ಹಾಗೂ ಹು-ಧಾ ವಾರ್ಡ್ ಸಮಿತಿ ಬಳಗದ ಸಹಯೋಗದಲ್ಲಿ ದು. ಸರಸ್ವತಿ ರಚನೆಯ ಹಾಗೂ ಲಕ್ಷಣ ಕೆ.ಪಿ ನಿರ್ದೇಶನದ "ಪೊರಕೆಯ ಹಾಡು " ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಚ್ಛತೆಯೇ ಸೇವೆ ಅಭಿಯಾನದ ಅಡಿಯಲ್ಲಿ ವಿನೂತನವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ 16 ದಿನಗಳಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪೌರ ಕಾರ್ಮಿಕರ ಕಾರ್ಯಕ್ಕೆ 7 ವಿಭಾಗದಲ್ಲಿ ಜಿಲ್ಲಾಡಳಿತದಿಂದ ಬಹುಮಾನ ದೊರೆತಿದೆ. ಕೆಲಸದ ನಡುವೆಯೂ ಕಾರ್ಮಿಕರ ಮನರಂಜನೆಗಾಗಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.ಪೊರಕೆಯ ಹಾಡು ನಾಟಕ ರಚನಕಾರ್ತಿ ದು. ಸರಸ್ವತಿ ಮಾತನಾಡಿ, ಪೌರ ಕಾರ್ಮಿಕರ ಬದುಕಿನ ಕುರಿತ ಪೊರಕೆಯ ಹಾಡು ನಾಟಕವನ್ನು ಮಹಾತ್ಮ ಗಾಂಧೀಜಿ ಜಯಂತಿ ದಿನ ಹಮ್ಮಿಕೊಂಡಿರುವುದು ಬಹಳಷ್ಟು ಅರ್ಥಪೂರ್ಣ. ಎರಡು ಸಣ್ಣ ಕಥೆ ಸೇರಿ ಪೊರಕೆಯ ಹಾಡು ನಾಟಕವಾಗಿದೆ. ಪೌರಕಾರ್ಮಿಕರೊಂದಿಗೆ ಹಲವಾರು ವರ್ಷ ಭಾಗಿಯಾಗಿ ಕೆಲಸ ಮಾಡಿದ್ದೇನೆ ಎಂದು ಮೆಲಕು ಹಾಕಿದರು.
ಎಷ್ಟೋ ಜನ ನಮ್ಮ ಸುತ್ತಲೂ, ನಮ್ಮ ಓಣಿಯ ಕಸ ಗುಡಿಸುತ್ತಿದ್ದರೂ ಅವರ ಹೆಸರು ನಮಗೆ ಗೊತ್ತಿಲ್ಲ. ನಮ್ಮ ಮನೆಯ ಕಾರ್ಯಕ್ರಮದ ಭಾಗ ಅವರಾಗುವುದಿಲ್ಲ. ಇದು ಈಗಿನ ವಿಪರ್ಯಾಸ. ಕಸ ಎತ್ತುವವರ ಬದುಕು ಕಷ್ಟದಾಯಕವಾಗಿದೆ. ವಿದೇಶದಲ್ಲಿ ಈ ಕೆಲಸವನ್ನು ಅಪಾಯಕಾರಿ ಕೆಲಸ ಮಾಡುವ ಪಟ್ಟಿಯಲ್ಲಿ ಸೇರಿಸಿ ಅತಿ ಹೆಚ್ಚು ಸಂಬಳ ಕೊಡುತ್ತಾರೆ. ಆದರೆ, ನಮ್ಮಲ್ಲಿ ಈ ವ್ಯವಸ್ಥೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿದರು. ಈ ವೇಳೆ ಹು-ಧಾ ವಾರ್ಡ್ ಸಮಿತಿ ಬಳಗದ ಲಿಂಗರಾಜ ಧಾರವಾಡಶೆಟ್ಟರ, ಅಧಿಕಾರಿಗಳಾದ ಗಿರೀಶ ತಳವಾರ, ಆನಂದ, ಅರುಣ ಸೇರಿದಂತೆ ಹಲವರಿದ್ದರು.