ಮಂಡ್ಯ ನಗರದ ಭಿಕ್ಷುಕಿ ಮನೆಯಲ್ಲಿ ಕೂಡಿಟ್ಟಿದ್ದು ಕೇವಲ ೮.೪೦ ಲಕ್ಷ ರು. ಮಾತ್ರವಲ್ಲ. ೩೦ ಲಕ್ಷಕ್ಕೂ ಅಧಿಕ ಹಣ. ಇದು ಅಚ್ಚರಿ ಎನಿಸಿದರೂ ಸತ್ಯ. ಭಾನುವಾರದವರೆಗೆ ಎಣಿಸಿರುವುದು ಕೇವಲ ೮ ರಿಂದ ೯ ಲಕ್ಷ ರು. ಮಾತ್ರ. ಇನ್ನೂ ೨೦ ಮೂಟೆಗಳಲ್ಲಿರುವ ಹಣವನ್ನು ಎಣಿಸುವುದು ಬಾಕಿ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಭಿಕ್ಷುಕಿ ಮನೆಯಲ್ಲಿ ಕೂಡಿಟ್ಟಿದ್ದು ಕೇವಲ ೮.೪೦ ಲಕ್ಷ ರು. ಮಾತ್ರವಲ್ಲ. ೩೦ ಲಕ್ಷಕ್ಕೂ ಅಧಿಕ ಹಣ. ಇದು ಅಚ್ಚರಿ ಎನಿಸಿದರೂ ಸತ್ಯ. ಭಾನುವಾರದವರೆಗೆ ಎಣಿಸಿರುವುದು ಕೇವಲ ೮ ರಿಂದ ೯ ಲಕ್ಷ ರು. ಮಾತ್ರ. ಇನ್ನೂ ೨೦ ಮೂಟೆಗಳಲ್ಲಿರುವ ಹಣವನ್ನು ಎಣಿಸುವುದು ಬಾಕಿ ಇದೆ.

ನಗರದ ಗುತ್ತಲು ಬಡಾವಣೆಯಲ್ಲಿ ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ನೂರ್ ಉನ್ನೀಸಾ ಮನೆಯಲ್ಲೇ ಮೃತಪಟ್ಟಿದ್ದರು. ಆನಂತರ ಸಂಬಂಧಿಕರು ಮನೆಯನ್ನು ಪರಿಶೀಲನೆ ನಡೆಸಿದಾಗ ಮೂಟೆಗಳಲ್ಲಿ ತುಂಬಿಟ್ಟಿದ್ದ ಹಣ, ಚಿಲ್ಲರೆ ಕಾಸುಗಳು ಪತ್ತೆಯಾಗಿದ್ದವು. ಭಾನುವಾರದವರೆಗೆ ಭಿಕ್ಷುಕಿ ಮನೆಯಲ್ಲಿದ್ದದ್ದು ೮.೪೦ ಲಕ್ಷ ರು. ಹಣ ಎಂದು ನಂಬಲಾಗಿತ್ತು. ಇದೀಗ ಭಿಕ್ಷುಕಿ ಸಂಬಂಧಿಕರು ಹಾಗೂ ಮುಸ್ಲಿಂ ಮುಖಂಡರು ನೀಡಿರುವ ಮಾಹಿತಿಯಂತೆ ಆಕೆಯ ಮನೆಯಲ್ಲಿ ೩೦ ಲಕ್ಷಕ್ಕೂ ಹೆಚ್ಚು ಹಣ ಕೂಡಿಟ್ಟಿರುವುದು ಬಹಿರಂಗಗೊಂಡಿದೆ.

ನೂರ್ ಉನ್ನೀಸಾಗೆ ಇಬ್ಬರು ಸಹೋದರಿಯರಿದ್ದು ಮದುವೆ ಆಗಿರಲಿಲ್ಲ. ಎರಡು ವರ್ಷದ ಹಿಂದೆ ನೂರ್ ಉನ್ನೀಸ್ ಸಹೋದರಿ ಮೃತಪಟ್ಟಿದ್ದರು. ಭಿಕ್ಷಾಟನೆ ಮಾಡಿಕೊಂಡು ಒಬ್ಬರೇ ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ನೂರ್ ಉನ್ನೀಸಾ ಶನಿವಾರ ಮೃತಪಟ್ಟಿದ್ದರು.

20 ಮೂಟೆಗಳಲ್ಲಿರುವ ಹಣ ಎಣಿಕೆ ಬಾಕಿ:

ಆಕೆಯ ಸಾವಿನ ಬಳಿಕ ಮನೆಯನ್ನು ಸ್ಥಳೀಯರು ಪರಿಶೀಲಿಸಿದಾಗ ೩೦ಕ್ಕೂ ಹೆಚ್ಚು ಮೂಟೆಗಳಲ್ಲಿ ಝಣ ಝಣ ಕಾಂಚಾಣ ಪತ್ತೆಯಾಗಿತ್ತು. ವೃದ್ಧೆ ಮನೆಯಲ್ಲಿ ಸಿಕ್ಕಿರುವ ಹಣ ಸದ್ಯಕ್ಕೆ ಗುತ್ತಲು ಬಡಾವಣೆಯ ಮಸೀದಿಯವರ ಸುಪರ್ದಿಯಲ್ಲಿದೆ. ನಿನ್ನೆಯವರೆಗೆ ಸುಮಾರು ೮-೯ ಲಕ್ಷ ಹಣ ಎಣಿಕೆ ಮಾಡಲಾಗಿದೆ. ಇನ್ನೂ ೨೦ ಮೂಟೆಯಲ್ಲಿರುವ ಹಣವನ್ನು ಎಣಿಕೆ ಮಾಡುವುದು ಬಾಕಿ ಇದೆ. ಮೃತಳ ಸಂಬಂಧಿಕರು ಬಂದ ಬಳಿಕ ಹಣ ಎಣಿಕೆ ಕಾರ್ಯ ಮಾಡಿ ನಂತರ ಹಣ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಮಾತು ಬರುತ್ತಿರಲಿಲ್ಲ, ಕಿವಿ ಕೇಳಿಸುತ್ತಿರಲಿಲ್ಲ:

ನೂರ್ ಉನ್ನೀಸಾ ೪೦ ವರ್ಷದಿಂದ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದರು. ಅವರಿಗೆ ಮಾತು ಬರುತ್ತಿರಲಿಲ್ಲ, ಕಿವಿ ಕೇಳುತ್ತಿರಲಿಲ್ಲ. ಸ್ವಲ್ಪ ಬುದ್ಧಿಮಾಂದ್ಯತೆ ಇತ್ತು. ಅವರನ್ನು ಯಾರೂ ನೋಡಿಕೊಳ್ಳುತ್ತಿರಲಿಲ್ಲ ಎನ್ನುವುದು ಸುಳ್ಳು. ಸಂಬಂಧಿಕರು ಅವರಿಗೆ ಇರಲು ಮನೆ ಕೊಟ್ಟಿದ್ದರು. ಆದರೂ ಅವರನ್ನು ಅವರೇ ನೋಡಿಕೊಳ್ಳುತ್ತಿದ್ದರು. ಅವರ ಸಂಬಂಧಿಕರು ಬಂದು ಕರೆದು ಅವರು ಹೋಗುತ್ತಿರಲಿಲ್ಲ.

ಭಿಕ್ಷೆ ಬೇಡುವುದು ಬೇಡ ಎಂದು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಭಿಕ್ಷೆ ಬೇಡಿ ಹಣ ಕೂಡಿಟ್ಟಿದ್ದು ಯಾರಿಗೂ ಗೊತ್ತಿರಲಿಲ್ಲ.

ನೂರ್ ಉನ್ನೀಸಾ ಇದ್ದ ಮನೆಯಲ್ಲಿ ಒಂದು ಕೊಠಡಿ ಇತ್ತು. ಆ ಕೊಠಡಿಗೆ ಇದುವರೆಗೆ ಯಾರನ್ನೂ ಸೇರಿಸುತ್ತಿರಲಿಲ್ಲ. ಅವರ ಮೃತಪಟ್ಟ ನಂತರ ಕೊಠಡಿಯನ್ನು ಪರಿಶೀಲಿಸಿದಾಗ ಮೂಟೆಗಳಲ್ಲಿ ಹಣ ತುಂಬಿಟ್ಟಿರುವುದು ಪತ್ತೆಯಾಯಿತು. ಕೊಠಡಿಯಲ್ಲಿದ್ದ ೮ ಚೀಲದಲ್ಲಿ ನಾಣ್ಯಗಳು ಇದ್ದವು. ಒಂದಷ್ಟು ಚೀಲಗಳಲ್ಲಿ ನೋಟುಗಳು ಇದ್ದವು. ಆಗ ೮.೪೦ ಲಕ್ಷ ಇರೋದು ಕಂಡು ಬಂದಿದ್ದ ವಿಷಯವನ್ನು ಮಸೀದಿಯ ಮುಖಂಡರಿಗೆ ಸ್ಥಳೀಯರು ವಿಷಯ ತಿಳಿಸಿದರು.

ಹಣ ಮಸೀದಿಗೆ ಬೇಡ:

ಭಿಕ್ಷುಕಿ ನೂರ್ ಉನ್ನೀಸಾ ಮನೆಯಲ್ಲಿ ಸಿಕ್ಕಿರುವ ಹಣವನ್ನು ಮಸೀದಿಗೆ ಪಡೆದುಕೊಳ್ಳುವುದಿಲ್ಲ. ಆ ಹಣವನ್ನು ಸಂಪೂರ್ಣವಾಗಿ ಅವರ ಕುಟುಂಬಸ್ಥರಿಗೆ ನೀಡಲಾಗುವುದು. ಈ ಹಣವನ್ನು ಅವರ ಕುಟುಂಬದವರು ಯಾರಿಗೆ ಬೇಕಾದರೂ ನೀಡಬಹುದು. ನೂರ್ ಅವರಿಗೆ ಮನೆ ಕಟ್ಟುವ ಆಸೆ ಇತ್ತು. ಅದಕ್ಕಾಗಿ ಅವರು ಕೂಡಿಟ್ಟಿರಬಹುದು. ಮನೆ ಕಟ್ಟಲು ಬಳಸುತ್ತೇವೆ, ಇಲ್ಲವಾದರೆ ಬಡವರಿಗೆ ನೀಡುತ್ತೇವೆ. ನೂರ್ ಉನ್ನೀಸಾ ಮನೆಯಲ್ಲಿ ಕೋಟ್ಯಂತರ ರು. ಹಣವಿತ್ತು ಎಂದು ಬಿಂಬಿಸಲಾಗಿದ್ದು, ಅದೆಲ್ಲವೂ ಸುಳ್ಳು ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.