ಶಾಲೆಯಲ್ಲಿ ಮೊಳಗುವ ಗಂಟೆ ದೇವಸ್ಥಾನದಲ್ಲಿನ ಗಂಟೆಗಳಿಗೆ ಸರಿಸಮಾನವಾದ ಪಾವಿತ್ರ್ಯತೆ ಹೊಂದಿದ್ದು, ಈ ದಿಸೆಯಲ್ಲಿ ಶಾಲೆಗಳು ಹೆಚ್ಚು ಹೆಚ್ಚು ನಿರ್ಮಾಣವಾಗಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣದಿಂದ ವಂಚಿತವಾಗದಂತೆ ಜಾಗ್ರತೆ ವಹಿಸಬೇಕಾಗಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಶಾಲೆಯಲ್ಲಿ ಮೊಳಗುವ ಗಂಟೆ ದೇವಸ್ಥಾನದಲ್ಲಿನ ಗಂಟೆಗಳಿಗೆ ಸರಿಸಮಾನವಾದ ಪಾವಿತ್ರ್ಯತೆ ಹೊಂದಿದ್ದು, ಈ ದಿಸೆಯಲ್ಲಿ ಶಾಲೆಗಳು ಹೆಚ್ಚು ಹೆಚ್ಚು ನಿರ್ಮಾಣವಾಗಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣದಿಂದ ವಂಚಿತವಾಗದಂತೆ ಜಾಗ್ರತೆ ವಹಿಸಬೇಕಾಗಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.

ಪಟ್ಟಣದ ದೊಡ್ಡ ಕೇರಿಯಲ್ಲಿ ಪುರಸಭೆ 15ನೇ ಹಣಕಾಸು ಯೋಜನೆಯಡಿ ಮಾಜಿ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್‌ರವರ ಅನುದಾನದಡಿ ರು.10 ಲಕ್ಷ ಹಾಗೂ ಸಹೋದರಿ ಪುರಸಭಾ ಸದಸ್ಯೆ ಕಮಲಮ್ಮ ಹುಲ್ಮಾರ್ ಅನುನುದಾನದಡಿ ರು.8 ಲಕ್ಷ ಹಾಗೂ ಪುರಸಭಾ ಸದಸ್ಯ ಡಿ.ಆರ್ ರಾಘವೇಂದ್ರರವರ ರು.5 ಲಕ್ಷ ಅನುದಾನದಲ್ಲಿ ಮತ್ತು ಪುರಸಭೆ ಹಾಗೂ ಗಿಡ್ಡೇಶ್ವರ ದೇವಸ್ಥಾನ ಸಮಿತಿ ವತಿಯಿಂದ ನಡೆದ ದೊಡ್ಡ ಕೇರಿಯ ಪೂರ್ವ ಮಹಾದ್ವಾರ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಧರ್ಮಕಾರ್ಯಗಳು ಕಾಲಕಾಲಕ್ಕೆ ಅಗತ್ಯವಾಗಿ ನಡೆಯಬೇಕಾಗಿದೆ ಎಂದ ಅವರು, ದೇವಸ್ಥಾನಗಳ ನಿರ್ಮಾಣದ ಜತೆಗೆ ಮುಖ್ಯವಾಗಿ ಶಾಲೆಗಳ ನಿರ್ಮಾಣದ ಮೂಲಕ ಮಕ್ಕಳಿಗೆ ಶಿಕ್ಷಣ ದೊರಕಿಸುವ ಕಾರ್ಯ ಬಹು ಮುಖ್ಯವಾಗಿದೆ. ಶಾಲೆಯಲ್ಲಿ ಮೊಳಗುವ ಗಂಟೆ ದೇವಸ್ಥಾನದಲ್ಲಿನ ಗಂಟೆಗಳಿಗೆ ಸರಿಸಮಾನವಾದ ಪಾವಿತ್ರ್ಯತೆ ಹೊಂದಿದ್ದು, ದೇವಸ್ಥಾನದ ಗಂಟೆಗಳಿಗಿಂತ ಶಾಲೆಯ ಗಂಟೆಗಳು ಹೆಚ್ಚು ಹೆಚ್ಚು ಮೊಳಗಿದಾಗ ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಪೂರ್ಣಗೊಂಡಿರುವ ಕಾನಗುಡಿಯಲ್ಲಿನ ಗಿಡ್ಡೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ಪಕ್ಷ ಭೇದ ಮರೆತು ಕಾಂಗ್ರೆಸ್ ಮುಖಂಡರ ಜತೆ ಸೇರಿ ಮುಖ್ಯಮಂತ್ರಿಗಳ ಭೇಟಿ ಮಾಡಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ಚುನಾವಣಾ ಸಂದರ್ಭದಲ್ಲಿ ನಾವು ರಾಜಕಾರಣ ಮಾಡುವುದು ಸಹಜ, ಆದರೆ ಅಭಿವೃದ್ಧಿ ವಿಚಾರ ಬಂದಾಗ ಸಮಾಜ ಮತ್ತು ರಾಜಕೀಯ ಪಕ್ಷಗಳು ಒಟ್ಟುಗೂಡಿ ಅಭಿವೃದ್ಧಿ ಕಡೆ ಗಮನಹರಿಸಬೇಕು ಆಗ ಮಾತ್ರ ಮತದಾರ ಪ್ರಭುಗಳಿಗೆ ನಾವು ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿ ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳು ಹೇಳಿದಂತೆ ಶೋಷಿತ, ಕೆಳ ಸಮುದಾಯಗಳು ಆಸ್ತಿ ಮನೆ ಜಮೀನು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸದೆ, ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು. ಇದರಿಂದ ನೀವು ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ, ನಂತರ ನೀವೇ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತೀರಿ ಎಂದರು. ಶಿಕ್ಷಣ ಇದ್ದಾಗ ಮಾತ್ರ ಸಮಾಜದಲ್ಲಿ ಪ್ರಶ್ನೆ ಮಾಡುವ ಮನಸ್ಥಿತಿ ಬರುತ್ತದೆ, ಪ್ರಶ್ನೆ ಮಾಡುತ್ತಾ ಹೋದಾಗ ನಾಯಕತ್ವ ಗುಣಗಳು ತಾನಾಗೇ ವೃದ್ಧಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ನಗರದ ಅಶೋಕಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ ಹುಲ್ಮಾರ್, ಮಾಜಿ ಪುರಸಭಾ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೆಕಾಯಿ, ಲಕ್ಷ್ಮಿ ಮಹಾಲಿಂಗಪ್ಪ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್ (ಗುಂಡ), ಪಾಲಾಕ್ಷಪ್ಪ ಭದ್ರಾಪುರದ, ರೇಣುಕಸ್ವಾಮಿ, ದುರ್ಗವ್ವಾರ್ ರಾಘವೇಂದ್ರ, ಬಡಗಿ ಪಾಲಾಕ್ಷಪ್ಪ, ಕಮಲಮ್ಮ ಹುಲ್ಮಾರ್, ಗೋಣಿ ಶಕುಂತಲಮ್ಮ, ಹರಳೆಣ್ಣೆ ಗಿರೀಶ್, ಭಂಡಾರಿ ಮಾಲತೇಶ್, ಪಚ್ಚಿ ಗಿಡ್ಡಪ್ಪ ಪುರಸಭಾ ಮುಖ್ಯ ಅಧಿಕಾರಿ ಭರತ್ ಮತ್ತಿತರರು ಉಪಸ್ಥಿತರಿದ್ದರು.