ಸಾರಾಂಶ
ಬೆಂಗಳೂರು : ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಿದ್ದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಟಿಎಂ 2ನೇ ಹಂತದ ನಿವಾಸಿ ಮನೀಶ್ ಕುಮಾರ್(25) ಮೃತ ಸವಾರ.
ಉತ್ತರಪ್ರದೇಶದ ಮೂಲದ ಮನೀಶ್ ಕುಮಾರ್ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮನೀಶ್, ಮಹದೇವಪುರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ 11.45ಕ್ಕೆ ಮಡಿವಾಳದ 21ನೇ ಮುಖ್ಯರಸ್ತೆ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ಗೆ ಪಾದಚಾರಿ ಅಡ್ಡಬಂದ ಹಿನ್ನೆಲೆಯಲ್ಲಿ ಚಾಲಕ ಬ್ರೇಕ್ ಹಾಕಿ ಬಸ್‌ನ ವೇಗವನ್ನು ತಗ್ಗಿಸಿದ್ದಾನೆ.
ಈ ವೇಳೆ ಹಿಂದೆ ಬರುತ್ತಿದ್ದ ಮನೀಶ್, ಬಸ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದ ಪರಿಣಾಮ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮನೀಶ್ ಅವರನ್ನು ಸಾರ್ವಜನಿಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬಿದ್ದ ರಭಸಕ್ಕೆ ಹೊಟ್ಟೆ ಹಾಗೂ ತಲೆಯಲ್ಲಿ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮನೀಶ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಮನೀಶ್ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.