ಸ್ನೇಹಿತರಿಬ್ಬರ ಹಳೆಯ ದ್ವೇಷಕ್ಕೆ ಸುಟ್ಟು ಹೋದ ಬೈಕ್!

| Published : Jun 18 2024, 12:52 AM IST

ಸಾರಾಂಶ

ಸ್ನೇಹಿತರಿಬ್ಬರ ಹಳೆಯ ದ್ವೇಷಕ್ಕೆ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ.

ಬಂಟ್ವಾಳ: ಸ್ನೇಹಿತರಿಬ್ಬರ ಹಳೆಯ ದ್ವೇಷಕ್ಕೆ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾದ ಘಟನೆ ತಾಲೂಕಿನ ಕುಮ್ಡೇಲು ಎಂಬಲ್ಲಿ ನಡೆದಿದೆ.

ಚಂದ್ರಹಾಸ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು, ಆರೋಪಿ ನಿತೇಶ್ ಎಂಬಾತ ಬೈಕ್‌ಗೆ ಬೆಂಕಿ ನೀಡಿ ಸುಟ್ಟು ಹಾಕಿದ್ದಾನೆ ಎಂದು ಸುಮಂತ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ:

ಅಮ್ಮುಂಜೆ ಪಾಂಡೀಲು ನಿವಾಸಿ ಚಂದ್ರಹಾಸ ಎಂಬವರು ಶಬರಿಮಲೆಗೆ ಹೋಗುವ ವೇಳೆ ಸ್ನೇಹಿತ ಕುಮ್ಡೆಲು ನಿವಾಸಿ ಸುಮಂತ್ ಅವರ ಮನೆಯ ಪಕ್ಕ ಬೈಕ್ ನಿಲ್ಲಿಸಿ ಕೀಯನ್ನು ಅವರಲ್ಲಿ ನೀಡಿ ಹೋಗಿದ್ದರು. ಈ ಮಧ್ಯೆ ಸುಮಂತ್ ಅವರು ಒಂದು ಬಾರಿ ಬೈಕನ್ನು ಬಳಕೆ ಮಾಡಿ ವಾಪಸ್‌ ಅದೇ ಜಾಗದಲ್ಲಿ ತಂದು ನಿಲ್ಲಿಸಿದ್ದರು.

ಸುಮಂತ ಸಹೋದರ ಸುಜಿತ್ ಹಾಗೂ ಆರೋಪಿ ನಿತೇಶ್ ಅವರಿಗೆ ಕೆಲ ದಿನಗಳ ಹಿಂದೆ ಗಲಾಟೆ ನಡೆದಿದ್ದು, ಈ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಸುಮಂತ ಬಳಕೆ ಮಾಡಿದ ಬೈಕ್ ಇವನದ್ದೇ ಎಂದು ಭಾವಿಸಿ ಆತನ ಮೇಲಿನ ಕೋಪದಿಂದ ಮನೆಯ ಸಮೀಪ ನಿಲ್ಲಿಸಲಾಗಿದ್ದ ಬೈಕನ್ನು ಸ್ವಲ್ಪ ದೂರ ದೂಡಿಕೊಂಡು ಹೋಗಿ ಬೆಂಕಿ ಹಚ್ಚಿದ್ದ. ಈತನ ಕೃತ್ಯವನ್ನು ನೋಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದೀಗ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೈಕ್‌ ಬೆಲೆ ೨೦ ಸಾವಿರ ರು. ಎಂದು ಅಂದಾಜಿಸಲಾಗಿದೆ.