ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕೀನ್ಯಾದ ನೈರೋಬಿಯಲ್ಲಿರುವ ಡಾ.ಸುಕನ್ಯಾ ಸೂನಗಹಳ್ಳಿ ಅವರ ''''ನಿನಗೆ ನೀನೇ ಗುರು'''' ಕೃತಿಯು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ನಾಡಿನ ಒಂಬತ್ತು ಸಾಧಕರ ಜೀವನಗಾಥೆಯಾಗಿದೆ.ಕರ್ನಾಟಕದ ಪರಿವರ್ತನೆಯ ಹರಿಕಾರ- ಡಾ.ಡಿ. ವೀರೇಂದ್ರ ಹೆಗ್ಗಡೆ, ಭಾರತ ಬಯೋಟೆಕ್ ರಾಣಿ- ಕಿರಣ್ ಮಜುಂದಾರ್ ಶಾ, ವೈದ್ಯಭೂಷಣ- ಡಾ.ಬಿ.ಎಂ. ಹೆಗ್ಡೆ, ಶಿಕ್ಷಣ ಶಿಲ್ಪಿ- ಡಾ. ಗುರುರಾಜ ಕರಜಗಿ, ಸಾಹಿತ್ಯ ರಂಗಕ್ಕೆ ರಂಗು ತಂದವರು, ಜನಪ್ರಿಯ ಚಿತ್ರಗೀತೆಗಳ ಸರದಾರ- ಡಾ. ದೊಡ್ಡರಂಗೇಗೌಡ, ಮಹಾನ್ ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ, ವಿಜ್ಞಾನ ಸಾಹಿತ್ಯದ ಅಭಿನವ ಕೊಲಂಬಸ್- ನಾಗೇಶ ಹೆಗಡೆ, ಸಕ್ಕರೆ ನಾಡಿನ ಅಕ್ಕರೆ ವೈದ್ಯ- ಡಾ.ಎಸ್.ಸಿ. ಶಂಕರೇಗೌಡ, ಕನ್ನಡದ ಕಣ್ಮಣಿ ಸಾಧನೆಯ ಗಣಿ- ಕೆ. ರಾಜ್‌ಕುಮಾರ್ ಅವರನ್ನು ಕುರಿತ ಪರಿಚಯ ಇಲ್ಲಿದೆ.ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮರಕ್ಷಣೆಯ ಜೊತೆಜೊತೆಗೆ ಶಿಕ್ಷಣ, ಉದ್ಯೋಗ, ಸಹಕಾರ ಸಂಘ, ಆರೋಗ್ಯ, ಕಲೆ, ಸಾಹಿತ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಸೇವಾ ಕ್ಷೇತ್ರ ಸೇರಿದಂತೆ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ದಾಖಲಿಸಲಾಗಿದೆ. ಬಾಲ್ಯ, ಶಿಕ್ಷಣ, ಧರ್ಮಾಧಿಕಾರಿಯಾಗಿದ್ದು, ಸೇವಾ ಕಾರ್ಯಗಳು, ಅನ್ನದಾನ, ವಿದ್ಯಾದಾನ, ಅಭಯದಾನ, ಔಷಧದಾನ, ಹವ್ಯಾಸಗಳು, ಸಂಸ್ಕೃತಿ- ಸಂಶೋಧನೆಗೆ ಉತ್ತೇಜನ, ಯಕ್ಷಗಾನ ಪರಂಪರೆ, ಸಾಮೂಹಿಕ ವಿವಾಹ, ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ, ಮಂಜುಶ್ರೀ ಮುದ್ರಣಾಲಯ, ಪುಸ್ತಕ ಪ್ರಕಾಶನ ಮಾಲೆ, ವಸತಿ, ಮಂಜೂಷ ಕಾರ್ ಮ್ಯೂಸಿಯಂ, ಜಮಾ ಉಗ್ರಾಣ, ಗರ್ಭಗುಡಿ ನವೀಕರಣ, ಸ್ವಉದ್ಯೋಗ ಪರಿಕಲ್ಪನೆಯ ರುಡ್ ಸೆಟ್ ಸ್ಥಾಪನೆಯ ಸೇರಿದಂತೆ ಎಲ್ಲಾ ಸೇವಾ ಕಾರ್ಯಗಳನ್ನು ವಿವರಿಸಲಾಗಿದೆ.ಯಾವುದೇ ಅಡತಡೆಗಳಿಗೆ ಜಗ್ಗದೇ ಬಯೋಕಾನ್ ಕಂಪನಿಯನ್ನು ವಿಶ್ವ ಮನ್ನಣೆ ಸಂಸ್ಥೆಯಾಗಿ ಕಟ್ಟಿ ಬೆಳೆಸಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಪೂರ್ವ ಸಾಧಕಿ ಕಿರಣ್ ಮಜುಂದಾರ್ ಶಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗುವಂತಿದೆ. ವೈದ್ಯ ವೃತ್ತಿಯನ್ನು ವಾಣಜ್ಯೀಕರಣ ಮಾಡದೇ ಸರ್ವರಿಗೂ ಆರೋಗ್ಯ ಬಯಸಿ ಸೇವೆ ಮಾಡಿದ ಡಾ.ಬಿ.ಎಂ. ಹೆಗ್ಡೆ ನಿಜಾರ್ಥದಲ್ಲಿಯೂ ''''ವೈದ್ಯ ನಾರಾಯಣೋ ಹರಿ'''' ಎಂಬಂತೆ ಇದ್ದಾರೆ. ಇವತ್ತಿನ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ವ್ಯಾಪಾರವಲ್ಲ, ಸೇವೆ ಮುಖ್ಯ ಎಂಬುದಕ್ಕೆ ಮಾದರಿಯಾಗಿದ್ದಾರೆ.ಕರುಣಾಳು ಬಾ ಬೆಳಕೆ ಎನ್ನುತ್ತಾ ಶಿಕ್ಷಣ ಪ್ರೇಮಿಗಳಿಗೆಲ್ಲಾ ಸ್ಫೂರ್ತಿಯಾದವರು ಡಾ. ಗುರುರಾಜ ಕರಜಗಿ. ಧನಾತ್ಮಕ ಚಿಂತನೆ, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರಾದವರು. ಅದೇ ರೀತಿ ದೊಡ್ಡರಂಗೇಗೌಡರು ಸಾಹಿತ್ಯದ ಜೊತೆ ಜೊತೆಗೆ ಗೀತೆರಚನೆಕಾರರಾಗಿ ಚಲನಚಿತ್ರ ಕ್ಷೇತ್ರದಲ್ಲೂ ಹೆಸರು ಮಾಡಿದವರು.ಎಸ್. ತಿಪ್ಪೇಸ್ವಾಮಿ ಅವರು ಚಲನಚಿತ್ರ ಛಾಯಾಗ್ರಹಣ, ವನ್ಯಜೀವಿ ಛಾಯಾಗ್ರಹಣದಲ್ಲಿ ಅಪಾರ ಹೆಸರು ಮಾಡಿದವರು ನಾಗೇಶ ಹೆಗಡೆ ಅವರು ಕನ್ನಡದಲ್ಲಿ ವಿಜ್ಞಾನ- ತಂತ್ರಜ್ಞಾನ, ಪರಿಸರ ಪತ್ರಿಕೋದ್ಯಮಕ್ಕೆ ಹೆಸರಾದವರು. ಅದೇ ರೀತಿ ಐದು ರು. ಡಾಕ್ಟರ್ ಶಂಕರೇಗೌಡ, ಕನ್ನಡವನ್ನೇ ತಮ್ಮ ಬದುಕು ಹಾಗೂ. ಉಸಿರಾಗಿಸಿಕೊಂಡಿರುವ ಕೆ. ರಾಜ್‌ಕುಮಾರ್ ಅವರ ಪರಿಚಯವೂ ಇದೆ.ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಅವರು ಪತಿ ಡಾ.ಎಸ್.ಜೆ. ಮಂಜೇಗೌಡ ಹಾಗೂ ತಮ್ಮ ಉದ್ಯೋಗ ನಿಮಿತ್ತ ದೂರದ ಕೀನ್ಯಾದ ನೈರೋಬಿಯಲ್ಲಿ ನೆಲೆಸಿದ್ದರೂ ಕನ್ನಡದ ಮೇಲಿನ ಪ್ರೀತಿ, ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ತಮ್ಮ ವೃತ್ತಿಯ ಜೊತೆ ಜೊತೆಗೆ ಪ್ರವೃತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಒಂಬತ್ತು ಸಾಧಕರ ಮಾಹಿತಿ ಸಂಗ್ರಹಿಸಿ, ಅವರೊಂದಿಗೆ ಸಂವಾದಿಸಿ, ಈ ಕೃತಿಯನ್ನು ಉಪಯುಕ್ತವಾಗುವ ರೀತಿಯಲ್ಲಿ ರೂಪಿಸಿಕೊಟ್ಟಿದ್ದಾರೆ. ಇಂದಿನ ಯುವಜನತೆ ಇಂತಹ ಕೃತಿಯನ್ನು ಓದುವ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಲು ಪ್ರೇರಣೆ ಪಡೆಯಬಹುದು.
ಈ ಕೃತಿಯನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸಿದೆ. ಆಸಕ್ತರು ಮೊ. 99459 39436 ಸಂಪರ್ಕಿಸಬಹುದು.-- ಬಾಕ್ಸ್--1--ಡಾ.ಎಪಿಜೆ ಅಬ್ದುಲ್ ಕಲಾಂ--ರಾಷ್ಟ್ರಪತಿಗಳಾಗಿದ್ದ ಖ್ಯಾತ ವಿಜ್ಞಾನ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಎಲ್ಲೇ ಹೋದರೂ ಪ್ರತಿಯೊಬ್ಬರೂ ದೊಡ್ಡ ದೊಡ್ಡ ಕನಸು ಕಾಣಬೇಕು. ಅದನ್ನು ನನಸು ಮಾಡಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಮುಖ್ಯರಸ್ತೆಯಲ್ಲಿಯೇ ಸಾಗಬೇಕು ಎಂದು ಹೇಳುತ್ತಿದ್ದರು. ಯಾವುದೇ ಸಾಧನೆಯ ಹಾದಿ ಅಷ್ಟು ಸಲಿಸಾಗಿ ಇರುವುದಿಲ್ಲ. ಅಡ್ಡಿ- ಆತಂಕಗಳು ಎದುರಾಗುತ್ತವೆ. ಆದರೆ ಅವುಗಳಿಗೆ ಹೆದರದೇ ಮುನ್ನಡೆದರೆ ಯಶಸ್ಸು ಖಚಿತ ಎಂಬುದನ್ನು ಇಲ್ಲಿರುವ ಒಂಭತ್ತು ಸಾಧಕರ ಜೀವನ- ಸಾಧನೆಯನ್ನು ಓದಿದಾಗ ಅರಿವಾಗುತ್ತದೆ. ಖಂಡಿತವಾಗಿಯೂ ಇಲ್ಲಿನ ಸಾಧಕರ ಸಾಧನೆ ಯುವಕ, ಯುವತಿಯರಿಗೆ ಸ್ಫೂರ್ತಿಯಾಗುವಂಥವು.